ಮೂಡಿಗೆರೆ ಪಟ್ಟಣದ ಹೆಸಗಲ್ ರಸ್ತೆ, ಸರ್ಕಾರಿ ಪಿಯು ಕಾಲೇಜ್ ಮತ್ತು ಪ್ರಥಮ ದರ್ಜೆ ಕಾಲೇಜ್ ರಸ್ತೆ, ಜೆ.ಎಂ.ರಸ್ತೆ, ಎಂ.ಜಿ.ರಸ್ತೆ, ಛತ್ರಮೈದಾನ ಬಡಾವಣೆ, ಆಜಾದ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಗುಂಡಿಯಾಗಿವೆ. 2017ರಲ್ಲಿ ನಗರೋತ್ಥಾನದ 3.5 ಕೋಟಿ ರೂ. ಅನುದಾನ ಬಳಸಿ ಈ ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸಲಾಗಿತ್ತು. ಕಳಪೆ ಕಾಮಗಾರಿಯಾಗಿದ್ದರಿಂದ ಕಾಂಕ್ರೀಟ್ ರಸ್ತೆ ಗುಂಡಿಯಾಗಿ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಅಮೃತ ಕುಡಿಯುವ ನೀರಿನ ಯೋಜನೆಯ ಪೈಪ್ ಅಳವಡಿಸಲು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಾಂಕ್ರೀಟ್ ರಸ್ತೆಗಳನ್ನು ಅಗೆದು ನಾಶಪಡಿಸಿದ್ದಾರೆ. ಕೆಲ ರಸ್ತೆಗಳಿಗೆ ಕಾಂಕ್ರೀಟ್‌ನಿಂದ ತೇಪೆ ಹಾಕಿದ್ದಾರೆ. ಅವರು ಹಾಕಿರುವ ತೇಪೆ ಆರಂಭಿಕ ಸಣ್ಣ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಪಟ್ಟಣದ ಎಲ್ಲ ರಸ್ತೆಗಳನ್ನು ಅಗೆದಿದ್ದರಿಂದ ಆ ಗುಂಡಿಗಳಲ್ಲಿ ಮಳೆ ನೀರು ಶೇಖರಣೆಗೊಂಡು ವಾಹನ ಸಂಚರಿಸುವಾಗ, ಕಾಲ್ನಡಿಗೆಯಲ್ಲಿ ಸಾಗುವವರ ಮೇಲೆ ಕೆಸರು ಮಿಶ್ರಿತ ನೀರು ಚಿಮ್ಮಿ ಅವಾಂತರ ಸೃಷ್ಟಿಸುತ್ತಿದೆ. ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಪಟ್ಟಣದ ಕಾಂಕ್ರೀಟ್ ರಸ್ತೆಗಳಲ್ಲಿ ತಿರುಗಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ. ಪಟ್ಟಣದ ಕಾಂಕ್ರೀಟ್ ರಸ್ತೆಗಳು ವಿಪರೀತ ಗುಂಡಿಯಾಗಿದ್ದರಿಂದ ವಾಹನಗಳು ಸಂಚರಿಸಲು ಪರದಾಡುತ್ತಾರೆ. ಗುಂಡಿಗೆ ಬೈಕ್‌ಗಳು ಬಿದ್ದು ಸವಾರರು ಗಾಯಗೊಂಡಿದ್ದಾರೆ. ಅಮೃತ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಒಂದೂವರೆ ವರ್ಷದಿಂದ ರಸ್ತೆಯನ್ನು ಅಗೆದು ಪೈಪ್ ಅಳವಡಿಸಲಾಗಿದೆ. ಅಗೆದ ರಸ್ತೆಯನ್ನು ಈವರೆಗೂ ಮುಚ್ಚಲು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಈಗ ಮಳೆ ಆರಂಭವಾದೊಡನೆ ಅಗೆದ ಗುಂಡಿಗಳಿಗೆ ತೇಪೆ ಹಾಕಲು ಆರಂಭಿಸಿದ್ದಾರೆ. ಇಂಥ ಕಳಪೆ ಕಾಮಗಾರಿ ನಡೆಸುತ್ತಿರುವ ಅಮೃತ್ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರರನ್ನು ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಬೇಕು. ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.