ಹೆಚ್ಚುತ್ತಿರುವ ಕಾನೂನು ಉಲ್ಲಂಘನೆ ಪ್ರಕರಣಗಳು

 ಬಾಳೆಹೊನ್ನೂರು ಪೊಲೀಸ್ ಠಾಣೆ.
ಬಾಳೆಹೊನ್ನೂರು ಪೊಲೀಸ್ ಠಾಣೆ.
Published on

ಪ್ರಮುಖ ಮುಖ್ಯಾಂಶಗಳು

  • ಕಾನೂನು ನಿರ್ಲಕ್ಷಿಸುವ ಜನ
  • ಬಾಳೆಹೊನ್ನೂರಲ್ಲಿ
ಸುಮನಾ ಸಚಿನ್ ಬಾಳೆಹೊನ್ನೂರು 
ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಕಾನೂನು ಉಲ್ಲಂಘನೆಯ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದು, ಜನರಲ್ಲಿ  ಕಾನೂನು ನಿರ್ಲಕ್ಷ್ಯಮನೋಭಾವನೆ ಬೆಳೆಯುತ್ತಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಕಳೆದ ಆರು ತಿಂಗಳಲ್ಲಿ ದಾಖಲಾಗಿರುವ ಲಘು ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿವೆ.
2026ರ ಜನವರಿಯಿಂದ ಜು.15ರವರೆಗೆ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ 440 ಲಘು ಪ್ರಕರಣಗಳು ದಾಖಲಾಗಿವೆ. ಪ್ರಮುಖವಾಗಿ ಗ್ರಾಮಗಳಲ್ಲಿ ವ್ಯಕ್ತಿಗಳ ನಡುವೆ ಸಣ್ಣಪುಟ್ಟ ಘರ್ಷಣೆಗಳು ನಡೆದು ಠಾಣೆಯ ಮೆಟ್ಟಿಲೇರುವುದು, ಸಾರ್ವಜನಿಕವಾಗಿ ಅಸಭ್ಯ ವರ್ತನೆ, ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿ ಸಾರ್ವಜನಿಕರಿಗೆ ತೊಂದರೆ, ಮುಖ್ಯರಸ್ತೆ, ಗ್ರಾಮೀಣ ರಸ್ತೆ ಮುಂತಾದ ಕಡೆಗಳಲ್ಲಿ ಸಾರ್ವಜನಿಕವಾಗಿ ಮದ್ಯಪಾನ ಮುಂತಾದವನ್ನು ಮಾಡಿದಾಗ ಪೊಲೀಸರು ಲಘು ಪ್ರಕರಣಗಳನ್ನು ದಾಖಲಿಸಿ ಕಾನೂನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. 
ಇದಲ್ಲದೇ ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿಯೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಜನವರಿಯಿಂದ ಜುಲೈವರೆಗೆ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ 895 ಮೋಟಾರ್ ವಾಹನ ಕಾಯ್ದೆ ಪ್ರಕರಣಗಳು ದಾಖಲಾಗಿವೆ. ಪ್ರಮುಖವಾಗಿ ಹೆಲ್ಮೆಟ್, ಸೀಟ್‌ಬೆಲ್ಟ್‌ರಹಿತ ಪ್ರಯಾಣ, ತ್ರಿಬಲ್ ರೈಡಿಂಗ್, ಚಾಲನೆ ವೇಳೆ ಮೊಬೈಲ್ ಬಳಕೆ, ವಾಹನಗಳಲ್ಲಿ ಬ್ಲಾೃಕ್ ಫಿಲ್ಮ್ ಅಳವಡಿಕೆ, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ, ಹಳದಿ ಬೋರ್ಡ್ ಚಾಲಕರು ಸಮವಸ್ತ್ರರಹಿತ ವಾಹನ ಚಾಲನೆ ಮುಂತಾದವುಗಳು ಇದರಲ್ಲಿ ಒಳಪಟ್ಟಿವೆ. ಈ ಪ್ರಕರಣಗಳಲ್ಲಿಯೂ ಪೊಲೀಸರು ವಾಹನ ಚಾಲಕರು, ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ.
ಮೋಟಾರ್ ವಾಹನ ಕಾಯ್ದೆಯನ್ನು (ಐಎಂಎ) ಉಲ್ಲಂಘಿಸಿದ 100ಕ್ಕೂ ಅಧಿಕ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದು, ಇವುಗಳಿಗೆ ನ್ಯಾಯಾಲಯದಲ್ಲಿ ದಂಡ ಕಟ್ಟಿಸಿ ಬಳಿಕ ವಾಹನಗಳನ್ನು ಬಿಡುಗಡೆ ಮಾಡುವ ಕಟ್ಟುನಿಟ್ಟಿನ ಕ್ರಮವನ್ನೂ ಪೊಲೀಸರು ಕೈಗೊಂಡಿದ್ದಾರೆ.
ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಿತ್ಯವೂ ಗಸ್ತು ತಿರುಗುವಿಕೆ, ವಾಹನಗಳ ತಪಾಸಣೆ ನಡೆಸುತ್ತಿದ್ದರೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದೆ ಕಾನೂನು ಉಲ್ಲಂಘನೆ ಮಾಡುತ್ತಿದ್ದು, ಜನರಲ್ಲಿ ಜಾಗೃತಿಯಿಲ್ಲದೆ ಲಘು ಪ್ರಕರಣ, ಐಎಂಎ ಪ್ರಕರಣಗಳು ದಾಖಲಾಗುತ್ತಿವೆ ಎನ್ನುವುದು ಪೊಲೀಸರ ಅಭಿಪ್ರಾಯ.
ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಕೆಲವು ನಿಗದಿತ ಸ್ಥಳಗಳಲ್ಲಿ ಅಪ್ರಾಪ್ತರ ದುರ್ವತನೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಆಲಿಂಗನ, ಚುಂಬಿಸುವುದು, ಗಂಟೆಗಟ್ಟಲೆ ಕುಳಿತು ಕಾಲಹರಣ ಮಾಡುತ್ತಿದ್ದಾರೆ. ಈ ರೀತಿಯ ದುರ್ವತನೆ ಕಾನೂನು ಪ್ರಕಾರ ಅಪರಾಧ ಎಂಬುದು ತಿಳಿದಿದ್ದರೂ ಯಾವುದೇ ಭಯವಿಲ್ಲದೆ ಆಟಾಟೋಪ ಮುಂದುವರಿಸಿದ್ದಾರೆ. ಕೆಲ ಅಪ್ರಾಪ್ತರು ಮಾಡುತ್ತಿರುವ ಇಂಥ ಕೆಟ್ಟ ಕೆಲಸಗಳು ಇತರ ಅಪ್ರಾಪ್ತರ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಸಭ್ಯಸ್ಥರು ಇಂಥ ಪ್ರದೇಶಗಳಲ್ಲಿ ಓಡಾಡಲು ಮುಜುಗರಪಡುವಂತಾಗಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net