ಗೃಹಜ್ಯೋತಿ ಅರ್ಹರಿಗೆ ಅನ್ಯಾಯವಾಗದಿರಲು ಪರಿಷ್ಕರಣೆ

ಚಿಕ್ಕಮಗಳೂರು ಮೆಸ್ಕಾಂ ಸಭಾಂಗಣದಲ್ಲಿ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸ ತಾಲ್ಲೂಕುಗಳು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಮತ್ತು ಮೆಸ್ಕಾಂ ಅಧಿಕಾರಿಗಳು ಹಾಗೂ ಮೀಟರ್ ರೀಡರ್‌ಗಳ ಕಾರ್ಯಾಗಾರ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.
ಚಿಕ್ಕಮಗಳೂರು ಮೆಸ್ಕಾಂ ಸಭಾಂಗಣದಲ್ಲಿ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸ ತಾಲ್ಲೂಕುಗಳು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಮತ್ತು ಮೆಸ್ಕಾಂ ಅಧಿಕಾರಿಗಳು ಹಾಗೂ ಮೀಟರ್ ರೀಡರ್‌ಗಳ ಕಾರ್ಯಾಗಾರ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಾನಂದಸ್ವಾಮಿ ಸ್ಪಷ್ಟನೆ
ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿಯ ಪರಿಷ್ಕರಣೆ ಆರಂಭವಾಗಿದ್ದು, ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಬಾರದೆಂದು ಈ ಪರಿಷ್ಕರಣೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.
ನಗರದ ಮೆಸ್ಕಾಂ ಸಭಾಂಗಣದಲ್ಲಿ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸ ತಾಲ್ಲೂಕುಗಳು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಮತ್ತು ಮೆಸ್ಕಾಂ ಅಧಿಕಾರಿಗಳು ಹಾಗೂ ಮೀಟರ್ ರೀಡರ್‌ಗಳ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಯೋಜನೆಯಲ್ಲಿ ದುರುಪಯೋಗವನ್ನು ತಡೆಯುವ ಸಲುವಾಗಿ ಮೀಟರ್ ರೀಡರ್‌ಗಳ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಗ್ರಾಹಕರು ಮತ್ತು ಫಲಾನುಭವಿಗಳು ಮೀಟರ್ ರೀಡರ್‌ಗಳಿಗೆ ಸಂಪೂರ್ಣ ಸಹಕಾರ ನೀಡಬೇಕು. ಪರಿಷ್ಕರಣೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಆದೇಶ ನೀಡಿದ್ದು ಈ ಹಿನ್ನೆಲೆಯಲ್ಲಿ ಮೆಸ್ಕಾಂ ಜಿಲ್ಲಾ, ತಾಲ್ಲೂಕು ಗ್ಯಾರಂಟಿ ಸಮಿತಿಗಳ ನೆರವಿನೊಂದಿಗೆ ಪರಿಷ್ಕರಣೆ ಕಾರ್ಯ ನಡೆಸುತ್ತಿದೆ. ಪರಿಷ್ಕರಣೆಗೆ ಮನೆಮನೆಗೆ ತೆರಳುವ ಮೀಟರ್ ರೀಡರ್‌ಗಳಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಲು ಕರೆ ನೀಡಿದರು. ಗ್ಯಾರಂಟಿ ಸಮಿತಿಯ ಸದಸ್ಯರು ಇವರುಗಳಿಗೆ ಅಗತ್ಯ ಸಹಕರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೆಸ್ಕಾಂನ ಸೂಪರಿಂಟೆಂಡೆಂಟ್ ಇಂಜಿನಿಯರ್ ಮಂಜುನಾಥ್ ಮಾತನಾಡಿ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ವಿದ್ಯುತ್ ಸಂಪರ್ಕದ ಆರ್.ಆರ್. ಸಂಖ್ಯೆ, ಆಧಾರ್ ಕಾರ್ಡ್, ಪಡಿತರ ಕಾರ್ಡ್, ವೋಟರ್ ಐಡಿ, ಅಗತ್ಯವಿದ್ದವರು ಮನೆ ಬಾಡಿಗೆಯ ಕರಾರು ನಕಲುಗಳನ್ನು ಮೊದಲೇ ಸಂಗ್ರ್ರಹಿಸಿ ಪರಿಷ್ಕರಣಾದಾರರು ಬಂದಾಗ ಸೂಕ್ತ ಮಾಹಿತಿಗಳನ್ನು ನೀಡಿದಲ್ಲಿ ಕೆಲವೇ ನಿಮಿಷದಲ್ಲಿ ಫಲಾನುಭವಿಗಳ ಪರಿಷ್ಕರಣೆ ನಡೆಯುತ್ತದೆ. ಇದಕ್ಕೆ ಜಿಲ್ಲೆಯ ಜನರು ಸಹಕರಿಸಬೇಕು ಎಂದರು.
ಈ ಯೋಜನೆಯು ಕರ್ನಾಟಕ ರಾಜ್ಯದ ಮತದಾರರಿಗೆ ಸೀಮಿತವಾಗಿದ್ದು ಹೊರರಾಜ್ಯದ ಪ್ರಜೆಗಳಿಗೆ ಅನ್ವಯಿಸುವುದಿಲ್ಲ. ಜಿಲ್ಲೆಯಲ್ಲಿ ೩,೫೧,೦೦೦ ಫಲಾನುಭವಿಗಳಿದ್ದು, ಸಮರೋಪಾದಿಯಲ್ಲಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ನಿನ್ನೆಯವರೆಗೆ ೪೯ ಸಾವಿರಕ್ಕೆ ಏರಿದೆ. ಜುಲೈ ೩೧ರವರೆಗೆ ಈ ಪರಿಷ್ಕರಣೆ ಕಾರ್ಯ ಮುಂದುವರಿಯಲಿದ್ದು, ಫಲಾನುಭವಿಗಳು ಸಹಕರಿಸಲು ಮನವಿ ಮಾಡಿದರು.
ಗೃಹಜ್ಯೋತಿ ಯೋಜನೆಯನ್ನು ಸರ್ಕಾರ ಗೃಹ ಬಳಕೆಗೆ ಸೀಮಿತಗೊಳಿಸಿದೆ. ಇತ್ತೀಚೆಗೆ ಕೆಲವರು ವಾಣಿಜ್ಯೋದ್ಯಮಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಸಿಬ್ಬಂದಿ ಸ್ಥಳದಲ್ಲೇ ಮಾಹಿತಿ ಕಲೆ ಹಾಕಿ ದಾಖಲಾತಿಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದರು.
ಕಾರ್ಯಾಗಾರದಲ್ಲಿ ಕಾರ್ಯಪಾಲಕ ಅಭಿಯಂತರರಾದ ಮಾರುತಿ, ತಾಲ್ಲೂಕು ಗ್ಯಾರಂಟಿ ಸಮಿತಿಗಳ ಅಧ್ಯಕ್ಷರುಗಳಾದ ಎಂ.ಮಲ್ಲೇಶ್, ಬಿ.ಎಸ್.ಜಯರಾಮ್ ಹಾಗೂ ಗಣೇಶ್ ಹೆಬ್ಬಾರ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net