ಕಡೂರು: ರಾಜ್ಯದಲ್ಲಿ ಒಳಮೀಸಲಾತಿ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬಂಜಾರ ಸಮಾಜಕ್ಕೆ ಮರಣ ಶಾಸನದಂತೆ ಮೀಸಲಾತಿ ಆದೇಶ ನೀಡಿರುವುದು ಸಮಾಜದ ಮಕ್ಕಳ ಬೆಳವಣಿಗೆಗೆ ಮಾರಕವಾಗಿದೆ ಎಂದು ಮಾಜಿ ಶಾಸಕ ಪಿ.ರಾಜೀವ್ ಆತಂಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಒಳಮೀಸಲಾತಿಯ ಅವೈಜ್ಞಾನಿಕ ಹಂಚಿಕೆ ಮೂಲಕ ಬಂಜಾರ ಸಮಾಜದ ಬಗ್ಗೆ ಸೇಡಿನ ರಾಜಕಾರಣ ನಡೆಸುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ವಿರುದ್ಧ ಜನಾಂದೋಲನ ಸಭೆ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ವೈಜ್ಞಾನಿಕವಾದ ಶೇ.4.5 ಒಳಮೀಸಲಾತಿ ಜಾರಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಸೇರಿದಂತೆ ವಾಸ್ತವಾಂಶಗಳನ್ನು ಪರಿಗಣಿಸದೆ ನಿರ್ಧಾರ ಕೈಗೊಂಡು ಮೀಸಲಾತಿ ಹಂಚಿಕೆ ಮಾಡಿರುವ ಬಗ್ಗೆ ಬಂಜಾರ ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಅರ್ಥೈಸಿಕೊಂಡು ತಾಂಡಗಳಲ್ಲಿ ಜಾಗೃತರಾಗಬೇಕಿದೆ ಎಂದರು.
ಈ ಹಿಂದೆ ಸಮಾಜವು ಸದಾಶಿವ ಆಯೋಗದ ವರದಿ ತಿರಸ್ಕರಿಸುವಂತೆ ಹೋರಾಟ ನಡೆಸಿ ನಮ್ಮ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿಕೊಡುವಂತೆ ಒತ್ತಾಯಿಸಲಾಗುತ್ತಿದ್ದು, ಅದರಂತೆ ಕಳೆದ ಬಿಜೆಪಿ ಸರ್ಕಾರ ಬಂಜಾರ ಸಮಾಜದ ನ್ಯಾಯ ಸಮ್ಮತ ಬೇಡಿಕೆಗೆ ಪುರಸ್ಕರಿಸಿ ಮೀಸಲಾತಿಯಡಿ ಕೇವಲ ಕೊರಚ, ಕೊರಮ, ಭೋವಿ ಹಾಗೂ ಬಂಜಾರ ನಾಲ್ಕು ಸಮಾಜಗಳನ್ನು ಒಳಗೊಂಡು ಶೇ.4.5 ಮೀಸಲಾತಿ ಒದಗಿಸಿಕೊಟ್ಟಿದ್ದರು ಎಂದರು.
ನಂತರ ಆರಂಭವಾದ ಕಾಂಗ್ರೆಸ್ ನಾಟಕ ಕಂಪನಿಗಳಿಂದಾಗಿ ಬಿಜೆಪಿ ಸರ್ಕಾರ ಹಂಚಿಕೆ ಮಾಡಿರುವ ಮೀಸಲಾತಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸಮಾಜಕ್ಕೆ ವಹಾದ್ರೋಹ ಎಸಗಿ ಎಸ್ಸಿ ಪಟ್ಟಿಯಿಂದ ತೆಗೆದು ಹಾಕುವ ಹುನ್ನಾರ ನಡೆಸುತ್ತಾರೆ ಎಂಬ ಪ್ರತಿ ತಾಂಡಗಳಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರಗಳನ್ನು ನಡೆಸಿದ ಪರಿಣಾಮದಿಂದ ಚಿಕ್ಕಮಗಳೂರು-ಕಡೂರು ಕ್ಷೇತ್ರಗಳು ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಕ್ಷೇತ್ರಗಳಲ್ಲಿ ಹಿನ್ನಡೆಗೆ ಕಾರಣವಾಯಿತು ಎಂದರು.
ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದ ಕಾಂಗ್ರೆಸ್ ಅಂದು ತಾಂಡಗಳಲ್ಲಿ ಅಪಪ್ರಚಾರ ಮಾಡಿದ್ದರೂ ಇದೀಗ ಸಮಾಜದ ಪ್ರತಿಯೊಂದು ಮನೆಗಳಲ್ಲಿ ಕಾಂಗ್ರೆಸ್ ಹಠಾವೋ ತಾಂಡಾ ಬಚಾವೊ ಎಂಬಂತೆ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸುವವರೆಗೂ ಸಮಾಜದ ಬಂಧುಗಳು ವಿಶ್ರಾಂತಿ ಪಡೆಯಬಾರದು ಎಂದು ಕರೆ ನೀಡಿದರು.
ತಾಂಡಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜ್ ನಾಯ್ಕ, ಸಮಾಜದ ಮುಖಂಡರಾದ ಲಿಂಬ್ಯಾನಾಯ್ಕಾ, ತುಳಸಿರಾಮ್, ಗುರುಪ್ರಸಾದ್, ಗೋವಿಂದನಾಯ್ಕ, ಆನಂದನಾಯ್ಕ, ಮಣಿಕಂಠ ರಾಥೋಡ್, ಕವಿತಾಬಾಯಿ, ಲಕ್ಷ್ಮಣ್‌ನಾಯ್ಕ, ಬಿ.ಟಿ.ಗಂಗಾಧರನಾಯ್ಕ, ಶ್ರೀನಿವಾಸ್‌ನಾಯ್ಕ ಮತ್ತಿತರಿದ್ದರು.