ಅಗೆದುಬಿಟ್ಟ ರಸ್ತೆಯನ್ನು ತುರ್ತಾಗಿ ದುರಸ್ತಿಪಡಿಸಿ

ಮೂಡಿಗೆರೆ ಛತ್ರಮೈದಾನ ಬಡಾವಣೆ ಮುಖ್ಯರಸ್ತೆಯನ್ನು ಡಿಸಿ ಭನ್ವರ್ ಸಿಂಗ್ ಮೀನಾ ಪರಿಶೀಲಿಸಿದರು. ಎಸ್.ಅಶ್ವಿನಿ, ಕಲಾವತಿ, ಗೋಪಾಲ್ ಜಾಧವ್, ಆನಂದ್, ರವಿಕುಮಾರ್, ಕೃಷ್ಣಯ್ಯ, ಜರಿನಾ ಇತರರಿದ್ದರು.
ಮೂಡಿಗೆರೆ ಛತ್ರಮೈದಾನ ಬಡಾವಣೆ ಮುಖ್ಯರಸ್ತೆಯನ್ನು ಡಿಸಿ ಭನ್ವರ್ ಸಿಂಗ್ ಮೀನಾ ಪರಿಶೀಲಿಸಿದರು. ಎಸ್.ಅಶ್ವಿನಿ, ಕಲಾವತಿ, ಗೋಪಾಲ್ ಜಾಧವ್, ಆನಂದ್, ರವಿಕುಮಾರ್, ಕೃಷ್ಣಯ್ಯ, ಜರಿನಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಮೃತ್ ಯೋಜನೆ ಅಧಿಕಾರಿಗಳಿಗೆ
  • ಡಿಸಿ ಭನ್ವರ್ ಸಿಂಗ್ ಮೀನಾ ಸೂಚನೆ
ಮೂಡಿಗೆರೆ: ಪಟ್ಟಣಕ್ಕೆ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಭೇಟಿ ನೀಡಿ ರಸ್ತೆ, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ವಿವಿಧ ವ್ಯವಸ್ಥೆ  ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣ ಪಂಚಾಯಿತಿ ಕಟ್ಟಡ ಶಿಥಿಲಗೊಂಡಿತ್ತು. ಪಾಚಿ ಕಟ್ಟಿ ಬಣ್ಣ ಮಾಸಿದ್ದ ಗೋಡೆಯನ್ನು ನೋಡಿದ ಅವರು ಸಿಡಿಮಿಡಿಗೊಂಡರು. ಕಚೇರಿಯನ್ನು ಈ ರೀತಿ ಇರಿಸಿಕೊಳ್ಳುವುದೇ? ದುರಸ್ತಿ ಮಾಡಿ ಸುಣ್ಣ-ಬಣ್ಣ ಮಾಡಿಸಿಕೊಳ್ಳಲು ಆಗಿಲ್ಲವಾ ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೆ ಕಟ್ಟಡ ದುರಸ್ತಿ ಪಡಿಸಬೇಕು ಎಂದು ಸೂಚಿಸಿದರು. ಬಳಿಕ ಅಧಿಕಾರಿಗಳ ಮತ್ತು ನೌಕರರ ಹಾಜರಾತಿ ಪರಿಶೀಲಿಸಿ ಮುಖ್ಯಾಧಿಕಾರಿ ಕಲಾವತಿ ಅವರಿಂದ ಪಟ್ಟಣದ ಅವ್ಯವಸ್ಥೆಯ ಮಾಹಿತಿ ಪಡೆದರು.
ಅಮೃತ್ ಕುಡಿಯುವ ನೀರಿನ ಯೋಜನೆ ಕಾಮಗಾರಿ ವೇಳೆ ಕಾಂಕ್ರೀಟ್ ರಸ್ತೆಗಳನ್ನು ಅಗೆದು ಧ್ವಂಸಗೊಳಿಸಿ ಪೈಪ್ ಅಳವಡಿಸಿ ಹಾಗೇ ಬಿಟ್ಟಿದ್ದರಿಂದ ವಾಹನ ಸವಾರರು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರಿನ ಬಗ್ಗೆ ಪರಿಶೀಲನೆ ನಡೆಸಿದರು. ಅಗೆದು ನಾಶಗೊಳಿಸಿದ ರಸ್ತೆಯನ್ನು ಕೂಡಲೆ ಸರಿಪಡಿಸಬೇಕು. ಸಾರ್ವಜನಿಕರಿಗೆ ತೊಂದರೆ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಮೃತ್ ಕುಡಿಯುವ ನೀರಿನ ಯೋಜನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 
ಬೀಜುವಳ್ಳಿ ಸುಂಡೆಕೆರೆ ಹಳ್ಳದ ದಡದಲ್ಲಿರುವ ಕುಡಿಯುವ ನೀರಿನ ಘಟಕ ಮತ್ತು ಕಿತ್ತಲೆಗಂಡಿ ಗ್ರಾಮದ ಪಂಪ್‌ಹೌಸ್‌ಗೆ ಭೇಟಿ ನೀಡಿ ನೀರು ಸಂಸ್ಕರಣಾ ಘಟಕವನ್ನು ಪರಿಶೀಲಿಸಿದರು. ಕುಡಿಯುವ ನೀರಿನ ಘಟಕದಲ್ಲಿ ಸ್ವಚ್ಛತೆ ಕಾಪಾಡಬೇಕು. ಬಡಾವಣೆಗಳಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಕೆ ಮಾಡಬೇಕು. ಕಲುಷಿತ ನೀರು ಪೂರೈಕೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಕಲಾವತಿ ಅವರಿಗೆ ಸೂಚಿಸಿದರು. ನಂತರ ಕಡೇಮಡ್ಕಲ್ ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತೆರಳಿ ಪರಿಶೀಲಿಸಿದರು.
ಬೀದಿ ದೀಪ ಉರಿಯುತ್ತಿಲ್ಲ. ಪಟ್ಟಣದ ಅಲ್ಲಲ್ಲಿ ಫ್ಲೆಕ್, ಬ್ಯಾನರ್‌ಗಳನ್ನು ಅನುಮತಿ ಪಡೆಯದೆ ಕಟ್ಟಲಾಗುತ್ತದೆ. ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಅಲ್ಲಲ್ಲಿ ನೀರು ಪೋಲಾಗುತ್ತಿದೆ. ಪಟ್ಟಣದ ಬಡಾವಣೆಗಳಲ್ಲಿ ಗಿಡಗಂಟಿ ಬೆಳೆದಿದ್ದರೂ ಕತ್ತರಿಸುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಬಂದಿವೆ. ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ಸಾರ್ವಜನಿಕರು ಪಪಂನಿಂದ ಅನುಮತಿ ಪಡೆದು ಕಟ್ಟಲು ಪ್ರತ್ಯೇಕವಾಗಿ ಸ್ಥಳಾವಕಾಶ ಮಾಡಿಕೊಡಬೇಕು. ಅನುಮತಿ ನೀಡಿದಷ್ಟು ದಿನ ಮಾತ್ರ ಕಟ್ಟಬೇಕು. ನಂತರ ತೆರವುಗೊಳಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗುವ ಆಯಕಟ್ಟಿನ ಜಾಗದಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅನುಮತಿ ಪಡೆಯದೆ ಕಟ್ಟಿದರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿ ನೀರು ಪೋಲಾಗದಂತೆ ಪೈಪ್‌ಲೈನ್ ಸರಿಪಡಿಸಬೇಕು. ಪೊದೆಗಳು ಬೆಳೆಯದಂತೆ ಆಗಾಗ ಕತ್ತರಿಸಬೇಕು. ಹೈಮಾಸ್ಟ್ ಹಾಗೂ ಸಾಮಾನ್ಯ ಬೀದಿ ದೀಪಗಳನ್ನು ದುರಸ್ತಿಪಡಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಭನ್ವರ್ ಸಿಂಗ್ ಮೀನಾ ಸೂಚಿಸಿದರು. 
ತಹಸೀಲ್ದಾರ್ ಎಸ್.ಅಶ್ವಿನಿ, ಪಪಂ ಮುಖ್ಯಾಧಿಕಾರಿ ಕಲಾವತಿ, ನಗರಾಭಿವೃದ್ಧಿ ಕೋಶದ ಗೋಪಾಲ್ ಜಾಧವ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂಜಿನಿಯರ್ ಆನಂದ್, ನಗರಾಭಿವೃದ್ಧಿ ಕೋಶದ ಎಇಇ ರವಿಕುಮಾರ್, ಪಪಂ ಆರೋಗ್ಯ ನಿರೀಕ್ಷಕ ಕೃಷ್ಣಯ್ಯ, ಜರೀನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net