ಸಂಚಾರಿ ಪೊಲೀಸ್ ಠಾಣೆ ಆರಂಭಕ್ಕೆ ಶಿಫಾರಸು

ಬೀರೂರು ಪೊಲೀಸ್ ಠಾಣೆಯಲ್ಲಿ ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್ ಸಿಬ್ಬಂದಿ ಜತೆ ಸಂವಹನ ನಡೆಸಿದರು. ಎಸ್‌ಪಿ ಜಿತೇಂದ್ರ ಸಿಂಗ್ ದಯಾಮ, ಹಾಲಪ್ಪ, ಧನಂಜಯ್ ಇದ್ದರು.
ಬೀರೂರು ಪೊಲೀಸ್ ಠಾಣೆಯಲ್ಲಿ ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್ ಸಿಬ್ಬಂದಿ ಜತೆ ಸಂವಹನ ನಡೆಸಿದರು. ಎಸ್‌ಪಿ ಜಿತೇಂದ್ರ ಸಿಂಗ್ ದಯಾಮ, ಹಾಲಪ್ಪ, ಧನಂಜಯ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ವಲಯದ ಐಜಿಪಿ ಅಮಿತ್ ಸಿಂಗ್ ಮಾುಹಿತಿ
  • ವಸತಿಗೃಹ ಹಳೇಯದಾಗಿದ್ದು
ಬೀರೂರು: ಸಂಚಾರಿ ಪೊಲೀಸ್ ಠಾಣೆ ಹಾಗೂ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕ (ಐಜಿಪಿ) ಅಮಿತ್ ಸಿಂಗ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕೊಠಡಿಗಳು, ಕಚೇರಿಗಳು, ಕಡತಗಳನ್ನು ಪರಿಶೀಲಿಸಿ ಉತ್ತಮವಾಗಿ ಠಾಣೆ ಮತ್ತು ಕಡತಗಳ ನಿರ್ವಹಣೆ ಹಾಗೂ ಸ್ವಚ್ಛತೆ ಕಾಪಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೀರೂರು ಠಾಣೆಯಲ್ಲಿ 42 ಪೊಲೀಸ್ ಸಿಬ್ಬಂದಿ, ಇಬ್ಬರು ಪಿಎಸ್‌ಐ ಹಾಗೂ ವೃತ್ತ ನಿರೀಕ್ಷಕರಿರುವುದು ಸರಿಯಾದ ಕ್ರಮವಾಗಿದೆ. ವಸತಿಗೃಹ ಹಳೇಯದಾಗಿದ್ದು ಅವುಗಳನ್ನು ತೆರವುಗೊಳಿಸಿ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಡೂರು-ಬೀರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಎರಡೂ ಪಟ್ಟಣಗಳನ್ನು ಒಳಗೊಂಡು ಸಂಚಾರಿ ಪೊಲೀಸ್ ಠಾಣೆ ಸ್ಥಾಪನೆಗೆ ಶಿಫಾರಸು ಮಾಡಲಾಗುವುದು ಎಂದರು.
ಪಟ್ಟಣದಲ್ಲಿ ಡ್ರಗ್ ಪೆಡ್ಲರ್‌ಗಳ ಹಾವಳಿ ಹೆಚ್ಚಾಗಿದ್ದು, ಯುವಜನರ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. 37 ಡ್ರಗ್ ವ್ಯಸನಿಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲಿ ಪೆಡ್ಲರ್‌ಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ವ್ಯಸನಿಗಳಿಗೆ ಕೌನ್ಸೆಲಿಂಗ್ ಮಾಡಿಸುವುದರ ಮೂಲಕ ನಿಯಂತ್ರಣಕ್ಕೆ ಮುಂದಾಗಿದ್ದೇವೆ ಎಂದು ಮಾಹಿತಿ ನೀಡಿದರು. 
ಸಿಬ್ಬಂದಿ ಕೊರತೆಯಿಂದ ವಾರದ ರಜೆ ದೊರೆಯುತ್ತಿಲ್ಲ ಹಾಗೂ ಕೆಲಸದಲ್ಲಿ ಒತ್ತಡ ಹೆಚ್ಚಾಗಿದೆ. ಬೀರೂರು 50 ಸಾವಿರ ಜನಸಂಖ್ಯೆ ಹಾಗೂ 35 ಗ್ರಾಮಗಳನ್ನು ಒಳಗೊಂಡಿದೆ. 2026ರ ಜನಗಣತಿ ಬಳಿಕ ಸಿಬ್ಬಂದಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಿಕ್ಕಮಗಳೂರು ಎಸ್ಪಿ ಜಿತೇಂದ್ರಕುಮಾರ್ ದಯಾಮ, ತರೀಕೆರೆ ಡಿವೈಎಸ್‌ಪಿ ಪರಶುರಾಮಪ್ಪ, ಬೀರೂರು ವೃತ್ತ ನಿರೀಕ್ಷಕ ಎನ್.ಎಸ್.ಹಾಲಪ್ಪ, ಪಿಎಸ್‌ಐ ಡಿ.ಎಚ್.ಧನಂಜಯ್, ಅಪರಾಧ ವಿಭಾಗದ ಪಿಎಸ್‌ಐ ಗಣಪತಿ ಶೇರಿಗಾರ್ ಹಾಗೂ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net