ಎಸ್‌ಐಆರ್ ಜಾಗೃತಿಗೆ ರಂಗೋಲಿ ಸ್ಪರ್ಧೆ

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸ್ವೀಪ್ ಸಮಿತಿ ಹಾಗೂ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್‌ಐಆರ್ ಜಾಗೃತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯನ್ನು ಡಿಸಿ ಭನ್ವರ್ ಸಿಂಗ್ ಮೀನಾ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಡಾ.ರಮೇಶ್, ಗಂಗಾಧರ್ ಮತ್ತಿತರರು ವೀಕ್ಷಿಸಿದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸ್ವೀಪ್ ಸಮಿತಿ ಹಾಗೂ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್‌ಐಆರ್ ಜಾಗೃತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯನ್ನು ಡಿಸಿ ಭನ್ವರ್ ಸಿಂಗ್ ಮೀನಾ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಡಾ.ರಮೇಶ್, ಗಂಗಾಧರ್ ಮತ್ತಿತರರು ವೀಕ್ಷಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಗದಿತ ಅವಧಿಯೊಳಗೆ ಗಣತಿ ನಮೂನೆ ಅರ್ಜಿ ಸಲ್ಲಿಸಲು ಡಿಸಿ ಮನವಿ
ಚಿಕ್ಕಮಗಳೂರು: ಎಸ್‌ಐಆರ್ ಪ್ರಕ್ರಿಯೆಯಡಿ ಮತದಾರರು ತಮ್ಮ ಗಣತಿ ನಮೂನೆ ಅರ್ಜಿಗಳನ್ನು ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಬಿಎಲ್‌ಒಗಳಿಗೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸ್ವೀಪ್ ಸಮಿತಿ ಹಾಗೂ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್‌ಐಆರ್ ಜಾಗೃತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಮೀಪ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧಾ ಕಾರ್ಯಕ್ರಮವನ್ನು ವೀಕ್ಷಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಜೂನ್ ೩೦ರಿಂದ ಪ್ರಾರಂಭಗೊಂಡಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹತ್ತಿರವಿರುವುದರಿಂದ ಇನ್ನೂ ಸುಮಾರು ಶೇ. ೧೦ರಷ್ಟು ಬರಬೇಕಿರುವ ಗಣತಿ ನಮೂನೆಗಳನ್ನು ಮತದಾರರು ಶೀಘ್ರವೇ ನೀಡಬೇಕು. ಜಿಲ್ಲೆಯಲ್ಲಿ ಇದುವರೆಗೆ ಶೇ. ೮೭ರಷ್ಟು ಗಣತಿ ನಮೂನೆಗಳು ವಾಪಸ್ ಸಂಗ್ರಹಗೊಂಡು, ಡಿಜಿಟಲೈಸ್ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ. ಶೇ. ೬ರಷ್ಟು ಎಎಸ್‌ಟಿಡಿ ಡ್ರಾಫ್ಟ್ ಗುರುತಿಸಲಾಗಿದ್ದು, ಇನ್ನು ಶೇ. ೭ ರಿಂದ ೮ರಷ್ಟು ಕಾರ್ಯ ಬಾಕಿಯಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ಎಸ್‌ಐಆರ್ ಕುರಿತು ಅರಿವು ಮೂಡಿಸಲು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ನೇತೃತ್ವದಲ್ಲಿ ಸ್ವೀಪ್ ಸಮಿತಿಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಜಿಲ್ಲೆಯಲ್ಲಿ ಎದುರಾಗಿರುವ ಮಳೆ ಅಭಾವ ಹಾಗೂ ಕೃಷಿ ಬಿಕ್ಕಟ್ಟಿನ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಅಂಕಿ-ಅಂಶಗಳಂತೆ ಶೇ. ೪೪ರಷ್ಟು ಮಳೆ ಕೊರತೆಯಾಗಿದೆ. ಕಡೂರು, ಸಖರಾಯಪಟ್ಟಣ, ಲಕ್ಕವಳ್ಳಿ, ಬೀರೂರು ಸೇರಿದಂತೆ ವಿವಿಧ ಭಾಗಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ರೈತರ ಜಮೀನುಗಳನ್ನು ಪರಿಶೀಲಿಸಿದೆ. ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಜಂಟಿ ತಂಡವು ಬೆಳೆ ಒಣಗುತ್ತಿರುವ ಮತ್ತು ಬಿತ್ತನೆಯಾಗದ ಜಮೀನುಗಳಿಗೆ ನೇರವಾಗಿ ತೆರಳಿ ಗ್ರೌಂಡ್ ಟ್ರೂಥಿಂಗ್ ಸರ್ವೇ ನಡೆಸುತ್ತಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಟಾಸ್ಕ್ ಫೋರ್ಸ್ ಅನುದಾನದಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ೩೦ ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನಿದ್ದು, ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರಗಳು ಹಾಗೂ ಕಡೂರು-ಬೀರೂರು ಭಾಗದಲ್ಲಿ ಮೇವು ಬಿತ್ತನೆಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಕಡೂರು ಸೇರಿದಂತೆ ಹೆಚ್ಚು ಮಳೆ ಅಭಾವವಿರುವ ತಾಲೂಕುಗಳ ಮಾಹಿತಿ ಸರ್ಕಾರಕ್ಕೆ ತಲುಪಿದ್ದು, ರಾಜ್ಯಮಟ್ಟದಲ್ಲಿ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಸಂಪುಟ ಉಪಸಮಿತಿ ನಿಯಮಾವಳಿಗಳಂತೆ ಪರಿಶೀಲಿಸಿ ಬರಪೀಡಿತ ಪ್ರದೇಶ ಘೋಷಣೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ನಿರ್ಮಿತಿ ಕೇಂದ್ರದ ಅಧಿಕಾರಿ ಗಂಗಾಧರ್ ಮುಂತಾದವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net