ರಸ್ತೆ ಅಗಲೀಕರಣಕ್ಕೆ ಶೀಘ್ರ ನಿವೇಶನ ಬಿಟ್ಟುಕೊಡಿ

ಎನ್.ಆರ್.ಪುರ ಪಪಂನಲ್ಲಿ ರಸ್ತೆ ವಿಸ್ತರಣೆ ವ್ಯಾಪ್ತಿಯ ಖಾತೆದಾರರ ಸಭೆಯಲ್ಲಿ ಎಸಿ ನಟೇಶ್ ಮಾತನಾಡಿದರು. ಡಾ.ನೂರುಲ್‌ಹುದಾ, ಆರ್.ವಿ.ಮಂಜುನಾಥ್, ದಿನೇಶ್ ನಾಯ್ಕ ಇದ್ದರು.
ಎನ್.ಆರ್.ಪುರ ಪಪಂನಲ್ಲಿ ರಸ್ತೆ ವಿಸ್ತರಣೆ ವ್ಯಾಪ್ತಿಯ ಖಾತೆದಾರರ ಸಭೆಯಲ್ಲಿ ಎಸಿ ನಟೇಶ್ ಮಾತನಾಡಿದರು. ಡಾ.ನೂರುಲ್‌ಹುದಾ, ಆರ್.ವಿ.ಮಂಜುನಾಥ್, ದಿನೇಶ್ ನಾಯ್ಕ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮನೆ ತೆರವು ಮಾಡದಿದ್ದರೆ ಬಲವಂತವಾಗಿ ಕಾರ್ಯಾಚರಣೆ
  • ತರೀಕೆರೆ ಎಸಿ ನಟೇಶ್ ಎಚ್ಚರಿಕೆ
ಎನ್.ಆರ್.ಪುರ: ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ನೀಡಿ ಜಾಗ ನೋಂದಣಿ ಮಾಡಿಕೊಟ್ಟವರಿಗೆ ಪರಿಹಾರದ ಹಣವನ್ನು ಖಾತೆಗೆ ಪಾವತಿ ಮಾಡಲಾಗಿದೆ. ಮನೆ, ನಿವೇಶನ ತೆರವುಗೊಳಿಸಿಕೊಳ್ಳಲು ಬಹಳಷ್ಟು ಸಮಯ ನೀಡಲಾಗಿದೆ. ಶೀಘ್ರವೇ ನಿವೇಶನ ಬಿಟ್ಟು ಕೊಡಬೇಕು ಎಂದು ತರೀಕೆರೆ ಉಪವಿಭಾಗಾಧಿಕಾರಿ ಹಾಗೂ ಭೂಸ್ವಾಧೀನ ಅಧಿಕಾರಿ ನಟೇಶ್ ಹೇಳಿದರು.
ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ನಡೆದ ರಸ್ತೆ ವಿಸ್ತರಣೆ ವ್ಯಾಪ್ತಿಯ ಖಾತೆದಾರರ ಸಭೆಯಲ್ಲಿ ಮಾತನಾಡಿ, ನೋಂದಣಿ ಮಾಡಿಕೊಟ್ಟ ನಂತರ ನಿವೇಶನ ಸರ್ಕಾರದ ಸ್ವತ್ತಾಗುತ್ತದೆ. ಹಣ ಪಾವತಿಯಾದವರಲ್ಲಿ ಬೆರಳೆಣಿಕೆಯಷ್ಟು ಖಾತೆದಾರರು ಮನೆಯನ್ನು  ತೆರವುಗೊಳಿಸಿದ್ದಾರೆ. ಉಳಿದವರು ಶೀಘ್ರವಾಗಿ ತೆರವುಗೊಳಿಸದಿದ್ದರೆ ಗುತ್ತಿಗೆದಾರರು ಯಂತ್ರಗಳನ್ನು ಬಳಸಿ ತೆರವುಗೊಳಿಸುತ್ತಾರೆ. ಇಂಥ ಸಂದರ್ಭದಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಖಾತೆದಾರರೇ ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 
ರಸ್ತೆ ಅಗಲೀಕರಣ ವ್ಯಾಪ್ತಿಯಲ್ಲಿ 71 ಖಾತೆದಾರರರು ನೋಂದಣಿ ಮಾಡಿಕೊಟ್ಟಿದ್ದು, ಪರಿಹಾರ ಖಾತೆಗೆ ಪಾವತಿಸಲಾಗಿದೆ. ಇನ್ನೂ 65 ಖಾತೆದಾರರು ನೋಂದಣಿ ಮಾಡಿಕೊಡಬೇಕಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿ ಚದರ ಅಡಿಗೆ 6.500 ರೂ. ಇದ್ದು ರಸ್ತೆ ಅಗಲೀಕರಣಕ್ಕೆ ನಿವೇಶನ ಬಿಟ್ಟು ಕೊಟ್ಟವರಿಗೆ ಪ್ರತಿ ಚದರ ಅಡಿಗೆ 12 ಸಾವಿರ ರೂ.ನಂತೆ ಪರಿಹಾರ ನೀಡಲಾಗುತ್ತಿದೆ. ಖಾತೆದಾರರು ತಾವಾಗಿಯೇ ಒಪ್ಪಿ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಟ್ಟಲ್ಲಿ ದಾಖಲೆ ಸಲ್ಲಿಸಿದ ಕೂಡಲೇ ಪರಿಹಾರ ಖಾತೆಗೆ ಜಮೆಯಾಗುತ್ತದೆ. ಭೂಸ್ವಾಧೀನದ ಮೂಲಕ ನಿವೇಶನ ಸ್ವಾಧೀನ ಪಡಿಸಿಕೊಂಡರೆ ಇದಕ್ಕೆ ನಡೆಯುವ ಪ್ರಕ್ರಿಯೆ ಬೇರೆ ಸ್ವರೂಪದ್ದಾಗಿರುತ್ತದೆ. ಪರಿಹಾರ ಸಿಗುವುದು ವಿಳಂಬವಾಗುವ ಸಾಧ್ಯತೆಯಿದೆ. ರಸ್ತೆ ವಿಸ್ತರಣೆಗೆ ಜಾಗ ಬಿಡಲು ಒಪ್ಪಿಗೆ ನೀಡದವರ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗುವುದು ಎಂದರು.
ಅನಧಿಕೃತ ಮನೆ ನಿರ್ಮಿಸಿಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜುಬೇದಾ ಮನವಿ ಮಾಡಿದರು.
ರಸ್ತೆ ಅಗಲೀಕರಣದಿಂದ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹಿಂದೆ ನಡೆದ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರು ನೀಡಿದ ಭರವಸೆಯಂತೆ ಆಶ್ರಯ ನಿವೇಶನ ನೀಡಲಾಗುವುದು. ಪ್ರವಾಸಿಮಂದಿರ ಸಮೀಪ ಅನಧಿಕೃತವಾಗಿ 10 ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಇದರಲ್ಲಿ ರಸ್ತೆ ಅಗಲೀಕರಣವಾದರೆ ಮೂರು ಕುಟುಂಬಗಳು ಸಂಪೂರ್ಣ ಮನೆ ಕಳೆದುಕೊಳ್ಳಲಿವೆ. ಮಾನವೀಯ ನೆಲೆಗಟ್ಟಿನಲ್ಲಿ ಈ ಕುಟುಂಬಗಳಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕೆಂದು ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮನವಿ ಮಾಡಿದರು. ರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ಸೂಚಿಸಿದವರಿಗೆ ಪರಿಹಾರ ಬರುವುದಿಲ್ಲ. ಹೊಸದಾಗಿ ಮನೆ ನಿರ್ಮಿಸಬೇಕಾದರೆ 70 ಅಡಿ ಬಿಡಬೇಕು ಎಂದು  ಅಗಲೀಕರಣಕ್ಕೆ ಒಪ್ಪದ ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು. ರಸ್ತೆ ವಿಸ್ತರಣೆಯಾಗುತ್ತಿರುವ ಪ್ರದೇಶದಲ್ಲಿರುವ ರಸ್ತೆ ದಾಖಲೆಗಳ ಪ್ರಕಾರ ಪಟ್ಟಣ ರಸ್ತೆ ಎಂದಿದೆ. ನಗರ ಯೋಜನಾ ದಾಖಲೆಗಳ ಪ್ರಕಾರ ರಾಜ್ಯ ಹೆದ್ದಾರಿ ಎಂದಾಗಿದೆ. ರಸ್ತೆ ಅಗಲೀಕರಣದಿಂದ ನಿವೇಶನ ಬಿಟ್ಟುಕೊಟ್ಟು ನೂತನವಾಗಿ ಮನೆ ನಿರ್ಮಿಸಿಕೊಳ್ಳುವವರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮನೆ ನಿರ್ಮಾಣಕ್ಕೆ ಪರವಾನಗಿ ಕೊಡುವ ವ್ಯವಸ್ಥೆಯಾಗಬೇಕು ಎಂದರು. 
ಪಟ್ಟಣ ಪಂಚಾಯಿತಿ ಆಡಳಿತ ಅಧಿಕಾರಿ ಡಾ. ನೂರುಲ್‌ಹುದಾ, ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಪಿಡಬ್ಲುೃಡಿ ಇ ಇಂಜಿನಿಯರ್ ದಿನೇಶ್ ನಾಯ್ಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net