ಕಾಫಿ ತೋಟ ಮತ್ತು ಭತ್ತದ ಗದ್ದೆಗಳನ್ನು ಪಾಳು ಬಿಡುವ ಹಂತಕ್ಕೆ ಕಾಡಾನೆ, ಕಾಡುಕೋಣ ಮತ್ತಿತರೆ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದೆ. ಗೋಣಿಬೀಡಿನ ಜಿ.ಹೊಸಳ್ಳಿ, ಕಸ್ಕೇಬೈಲ್, ಕಲ್ಲುಗುಡ್ಡ, ಕಮ್ಮರಗೋಡು, ಮಾಕೋನಹಳ್ಳಿ ಭಾಗದಲ್ಲಿ ಕಳೆದ 15 ದಿನದಿಂದ 40ಕ್ಕೂ ಹೆಚ್ಚು ಕಾಡಾನೆಗಳ ಮೂರ್ನಾಲ್ಕು ಗುಂಪು ನಿರಂತರವಾಗಿ ಕಾಫಿ ತೋಟ ಮತ್ತು ಜನವಸತಿ ಪ್ರದೇಶದಲ್ಲಿ ತಿರುಗಾಡುತ್ತಾ ಸಾರ್ವಜನಿಕರಿಗೆ ಇನ್ನಿಲ್ಲದ ಉಪಟಳ ನೀಡುತ್ತಿದೆ. ಮನೆ ಆವರಣದಲ್ಲಿರುವ ಸಿಂಟೆಕ್ಸ್, ಡ್ರಮ್, ಕಾರ್‌ಗೆ ಹಾನಿಮಾಡಿದೆ. ಹಲವಾರು ತೋಟದಲ್ಲಿ ಕಾಫಿ, ಕಾಳುಮೆಣಸು, ಅಡಕೆ, ಬಾಳೆ ಮತ್ತಿತರೆ ಬೆಳೆಗಳನ್ನು ಧ್ವಂಸಗೊಳಿಸಿದೆ ಎಂದು ಬೆಳೆಗಾರರು ದೂರಿದರು.