ವಸತಿರಹಿತ ಫಲಾನುಭವಿಗಳಿಗೆ ಮನೆ ನೀಡಿ

ಹಳೆಕೋಟೆ ಮನೋಜ್.
ಹಳೆಕೋಟೆ ಮನೋಜ್.
Published on
ಮೂಡಿಗೆರೆ: ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಕಳೆದ 3 ವರ್ಷಗಳಿಂದ ವಸತಿ ರಹಿತ ಫಲಾನುಭವಿಗಳಿಗೆ ಮನೆ ನೀಡದೆ ಬಡವರನ್ನು ಸೂರಿನಿಂದ ವಂಚಿಸಲಾಗುತ್ತಿದೆ ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯ ಹಳೆಕೋಟೆ ಮನೋಜ್ ದೂರಿದರು.
ಹಿಂದಿನ ಬಿಜೆಪಿ ಸರ್ಕಾರ ದಲಿತರು, ಹಿಂದುಳಿದ ವರ್ಗದ ವಸತಿರಹಿತ ಫಲಾನುಭವಿಗಳಿಗೆ ಮನೆ ನೀಡಲು ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆ ಜಾರಿಗೆ ತಂದಿತ್ತು. ಪ್ರತಿ ಗ್ರಾಪಂಗಳಿಗೆ ಕನಿಷ್ಠ 50 ರಿಂದ 100 ಮನೆಗಳನ್ನು ಪ್ರತಿವರ್ಷ ನೀಡಲಾಗುತ್ತಿತ್ತು. ಇದರಿಂದ ಗ್ರಾಮದಲ್ಲಿರುವ ಬಡ ಕುಟುಂಬದ ವಸತಿ ರಹಿತ ಫಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಯಾವುದೆ ಗ್ರಾಪಂಗಳಿಗೂ ಒಂದು ಮನೆಯನ್ನು ಬಿಡುಗಡೆ ಮಾಡಿಲ್ಲ. ಸರ್ಕಾರದ ಈ ಧೋರಣೆಯಿಂದ ವಸತಿರಹಿತ ಕುಟುಂಬದವರು ಬಾಡಿಗೆ ಮನೆ, ಕಾಫಿ ತೋಟದ ಕೂಲಿ ಲೈನ್ ಮತ್ತು ಜೋಪಡಿಗಳಲ್ಲಿ ಕಾಲ ಕಳೆಯುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದರು.
 ಅತಿವೃಷ್ಠಿಯಿಂದ ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ನಷ್ಟ ಸಂಭವಿಸಿದ್ದರೂ ರೈತರಿಗೆ ನಯಾ ಪೈಸೆ ನೀಡಿಲ್ಲ. ಹಿಂದೆ ಬಿಜೆಪಿ ಸರ್ಕಾರ 10 ಎಚ್‌ಪಿ ಒಳಗಿನ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಿದೆ. ಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ರೈತರ ಪಂಪ್ ಸೆಟ್ ಬಿಲ್ಲನ್ನು ರೈತರಿಂದ ದುಪ್ಪಟ್ಟು ವಸೂಲಿ ಮಾಡುತ್ತಿದೆ. ಸರ್ಕಾರ ಕೂಡಲೆ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಬೇಕು. ಬಡವರಿಗೆ ಗ್ರಾಪಂ ಮೂಲಕ ಅಂಬೇಡ್ಕರ್ ಮತ್ತು ಬಸವ ವಸತಿ ಯೋಜನೆಯಲ್ಲಿ ಮನೆ ನೀಡಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net