ಗ್ರಾಮೀಣಾ ಭಾಗದಲ್ಲಿ ಸಮರ್ಪಕ ವಿದ್ಯುತ್ ಪೂರೈಸಿ

ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಕಡೂರು ಮೆಸ್ಕಾಂ ಉಪವಿಭಾಗೀಯ ಕಚೇರಿ ಆವರಣದಲ್ಲಿ ಯಳ್ಳಂಬಳಸೆ, ಯಳಗೊಂಡನಹಳ್ಳಿ ಹಾಗೂ ಸುತ್ತಮುತ್ತಲಿನ ರೈತರು ಪ್ರತಿಭಟನೆ ನಡೆಸಿದರು.
ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಕಡೂರು ಮೆಸ್ಕಾಂ ಉಪವಿಭಾಗೀಯ ಕಚೇರಿ ಆವರಣದಲ್ಲಿ ಯಳ್ಳಂಬಳಸೆ, ಯಳಗೊಂಡನಹಳ್ಳಿ ಹಾಗೂ ಸುತ್ತಮುತ್ತಲಿನ ರೈತರು ಪ್ರತಿಭಟನೆ ನಡೆಸಿದರು.
Published on
ಕಡೂರು: ಗ್ರಾಮೀಣ ಭಾಗದಲ್ಲಿ ಐಪಿ ಸೆಟ್‌ಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡದೆ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿರುವ ಮೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಯಳಗೊಂಡನಹಳ್ಳಿ, ಯಳ್ಳಂಬಳಸೆ, ವಿಠಲಾಪುರ ಭಾಗದ ಸುತ್ತಮುತ್ತಲ ಗ್ರಾಮಸ್ಥರು ಮೆಸ್ಕಾಂ ಉಪವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಯಳ್ಳಂಬಳಸೆ ಗ್ರಾಮದ ಮುಖಂಡ ಸುಪ್ರಿತ್ ಮಾತನಾಡಿ, ರೈತರ ಜಮೀನುಗಳಿಗೆ ನೀರು ಹಾಯಿಸಿಕೊಳ್ಳಲು ಸರ್ಕಾರದ ನಿಯಮದಂತೆ ಏಳು ಗಂಟೆ ನೀಡಬೇಕಾದ ವಿದ್ಯುತ್ ಪೂರೈಕೆಯಲ್ಲಿ ಮೆಸ್ಕಾಂ ಲೈನ್‌ಮ್ಯಾನ್‌ಗಳು ಇಲ್ಲದ ಸಬೂಬು ಹೇಳುತ್ತಾ ಬೇಕಾ ಬಿಟ್ಟಿಯಾಗಿ ಮೂರು ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಇದರಿಂದ ಜಮೀನಿನಲ್ಲಿ ಅಳವಡಿಸಿರುವ ಬೋರ್‌ವೆಲ್‌ಗಳು ಸುಟ್ಟುಹೋಗುತ್ತಿವೆ. ಸರ್ಕಾರದ ನಿಯಮದಂತೆ ವಿದ್ಯುತ್ ಪೂರೈಕೆ ಮಾಡುವಂತೆ ಸಾಕಷ್ಟು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷೃವಹಿಸಿದ್ದಾರೆ ಎಂದು ದೂರಿದರು.
ಯಳಗೊಂಡನಹಳ್ಳಿ, ಯಳ್ಳಂಬಳಸೆ, ಚಿಕ್ಕನಾಯ್ಕನಹಳ್ಳಿ, ವೈ,ಮಲ್ಲಾಪುರ, ಸೂರಾಪುರ, ಸಾದರಹಳ್ಳಿ, ಮಲ್ಲಿದೇವಿಹಳ್ಳಿ, ವಿಠಲಪುರ ಭಾಗದ ರೈತರು ಮೆಸ್ಕಾಂ ಉಪವಿಭಾಗೀಯ ಕಚೇರಿ ಆವರಣದಲ್ಲಿ ಪ್ರತಿಭಟನೆಗಾಗಿ ಜಮಾಯಿಸಿದ್ದರು. ವಿದ್ಯುತ್ ಸಮಸ್ಯೆ ಸರಿಪಡಿಸಿಕೊಡುವಂತೆ ಮೆಸ್ಕಾಂ ಎಇಗೆ ಗ್ರಾಮಸ್ಥರು ದೂರವಾಣಿ ಮೂಲಕ ಕರೆ ಮಾಡಿದರೂ ಕರೆ ಸ್ವೀಕರಿಸಿದ ಹಿನ್ನಲೆಯಲ್ಲಿ ಕೆರಳಿದ ಗ್ರಾಮಸ್ಥರು ಮೆಸ್ಕಾಂ ಉಪವಿಭಾಗೀಯ ಕಚೇರಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲು ಮುಂದಾದಾಗ ಪೊಲೀಸರು ಮಧ್ಯಪ್ರವೇಶಿಸಿ ಮಂಗಳವಾರ ಮೆಸ್ಕಾಂ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net