ಸಾರ್ವಜನಿಕರು ನೀಡುವ ದೂರಿಗೆ ಸಮಂಜಸ ಹಿಂಬರಹ ನೀಡಿ

27 nrp 1
27 nrp 1
Published on
ಎನ್.ಆರ್.ಪುರ: ಸರ್ಕಾರದ ಯಾವುದೇ ಇಲಾಖೆಗಳಿಗೆ ಸಾರ್ವಜನಿಕರು ದೂರು ನೀಡಿದರೆ ಅವರಿಗೆ ಸಮಂಜಸವಾದ ಹಿಂಬರಹ ನೀಡಬೇಕು ಎಂದು ಚಿಕ್ಕಮಗಳೂರು ಲೋಕಾಯುಕ್ತ ಸಬ್‌ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ಸೂಚಿಸಿದರು.
ತಾಪಂ ಸಾಮರ್ಥ್ಯಸೌಧದಲ್ಲಿ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಅಧ್ಯಕ್ಷತೆಯಲ್ಲಿ ನಡೆದ ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರು ದೂರು ನೀಡಿದರೆ ಕಡತಗಳು ಲಭ್ಯವಿಲ್ಲ ಎಂಬ ಹಿಂಬರಹಗಳು ಬಹುತೇಕ ಕಂದಾಯ ಇಲಾಖೆಯಿಂದ ನೀಡಲಾಗುತ್ತಿದೆ ಎಂದರು.
ಸಾರ್ವಜನಿಕರು ನಮಗೆ ದೂರು ಸಲ್ಲಿಸಿದಾಗ ತನಿಖೆಗೆ ಕಡತಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ಯಾರೇ ದೂರು ನೀಡಿದರೂ ನಿಖರ ಹಿಂಬರಹ ನೀಡಿದರೆ ಸಾರ್ವಜನಿಕರು ನಮಗೆ ದೂರು ನೀಡುವುದಿಲ್ಲ. ಅಧಿಕಾರಿಗಳು ಕಾನೂನು ದುರುಪಯೋಗಪಡಿಸಿಕೊಂಡರೆ ಸಂಬಂಧಪಟ್ಟ ಅಧಿಕಾರಿಯು ತಲೆದಂಡ ತೆರಬೇಕಾಗುತ್ತದೆ. ಕರ್ತವ್ಯ ನಿರ್ಲಕ್ಷ್ಯ, ಕಾನೂನು ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬಹುದು ಎಂದರು.
ಕಡತಗಳು ಲಭ್ಯವಿಲ್ಲ ಎಂದು ಹಿಂಬರಹ ನೀಡುವುದು ಸರಿಯಲ್ಲ. ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಕೆಲವು ಮರಣ ಹೊಂದಿದ ವ್ಯಕ್ತಿ ಹೆಸರಿಗೆ ಪಹಣಿ, ಖಾತೆಯಾಗಿರುವ ಉದಾಹರಣೆಗಳೂ ಇವೆ. ಇಂತಹ ಸಂದರ್ಭದಲ್ಲಿ ಕಡತಗಳ ಪರಿಶೀಲನೆ ಅವಶ್ಯಕವಾಗಿರುತ್ತದೆ ಎಂದು ಹೇಳಿದರು.
ಮೆಸ್ಕಾಂ ಇಲಾಖೆ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿವೆ. ಅಧಿಕಾರಿಗಳು ದೂರುಗಳು ಬಾರದಂತೆ ಎಚ್ಚರವಹಿಸಿ ಕರ್ತವ್ಯ ನಿರ್ವಹಿಸಬೇಕು. ಅಧಿಕಾರಿಗಳಿಂದ ಅಧಿಕಾರ ದುರಪಯೋಗವಾದ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ದಾಖಲೆ ನೀಡಿದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಸಾರ್ವಜನಿಕರು ದೂರು ನೀಡಲು ಜಿಲ್ಲಾ ಕೇಂದ್ರಕ್ಕೆ ಬರಲು ಸಾಧ್ಯವಾಗದಿದ್ದರೆ ಅಂಚೆ ಮೂಲಕ ರಿಜಿಸ್ಟರ್ ಪೋಸ್ಟ್ ಮಾಡಬಹುದು ಎಂದರು.
ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ತಹಸೀಲ್ದಾರ್ ಡಾ.ನೂರುಲ್‌ಹುದಾ, ಮಂಜುನಾಥ್, ಎ.ಸಿ.ಶ್ರೀನಿವಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net