ಚಿಕ್ಕಮಗಳೂರು: ರೈತರು ಎದುರಿಸುತ್ತಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆಯಿಂದ ಆಜಾದ್ ವೃತ್ತದಲ್ಲಿ ಪ್ರತಿಭಟನೆ ನೆಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿರವರಿಗೆ ಮನವಿ ಸಲ್ಲಿಸಲಾಯಿತು.
ಇಂದು ಬೆಳಗ್ಗೆ ರೈತ ಸಂಘದ ಪದಾಧಿಕಾರಿಗಳು ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸಗೊಬ್ಬರ, ಡೀಸೆಲ್, ಪೆಟ್ರೋಲ್‌ಬೆಲೆ ಏರಿಕೆಯನ್ನು ತಕ್ಷಣ ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ. ಮಹೇಶ್ ಮಾತನಾಡಿ, ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಕೃಷಿ ಭೂಮಿಯನ್ನು ಹಸನುಮಾಡಿಕೊಂಡು ಸಿದ್ಧತೆ ನೆಡೆಸುತ್ತಿರುವ ರೈತರಿಗೆ ರಸಗೊಬ್ಬರ ಮತ್ತು ಡೀಸೆಲ್ ಬೆಲೆ ಏರಿಕೆ ತೀವ್ರ ಆಘಾತವನ್ನು ಉಂಟುಮಾಡಿದೆ ಎಂದು ಆರೋಪಿಸಿದರು.
ಕಳೆದ ಕೆಲವು ತಿಂಗಳುಗಳಿಂದ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ ಇದರಿಂದಾಗಿ ಟ್ರ್ಯಾಕ್ಟರ್ ಉಳುಮೆ, ನೀರಾವರಿ ಪಂಪ್‌ಸೆಟ್ ಬಳಕೆ ಮತ್ತು ಬೆಳೆ ಸಾಗಾಣಿಕ ವೆಚ್ಚವು ದುಪ್ಪಟ್ಟಾಗಿದ್ದು ಜೊತೆಗೆ ರಸಗೊಬ್ಬರಗಳ ಬೆಲೆಯೂ ಗಗನಕ್ಕೇರಿರುವುದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಬಿತ್ತನೆ ಮಾಡುವುದೇ ದುಸ್ತರವಾಗಿದೆ ಎಂದು ತಿಳಿಸಿದರು.
ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆಸಿಗದೆ ನಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಕೃಷಿ ವೆಚ್ಚದ ಈ ಹೊರೆ ರೈತರ ಬೆನ್ನುಮೂಳೆ ಮುರಿದಂತಾಗಿದೆ, ಕೂಡಲೇ ರಸಗೊಬ್ಬರಗಳ ಬೆಲೆಯನ್ನು ಇಳಿಸಬೇಕು, ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಹೆಚ್ಚುವರಿ ಸಹಾಯಧನ ಒದಗಿಸಬೇಕು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಡೀಸೆಲನ್ನು ರಿಯಾಯಿತಿ ದರದಲ್ಲಿ ಕಾರ್ಡ್‌ಗಳ ಮೂಲಕ ವಿತರಿಸಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನ ವರದಿಯಂತೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು. ಉಳುಮೆ, ಬಿತ್ತನೆ, ಬೆಳೆ ಸಾಗಾಣಿಕೆಗೆ ಡೀಸೆಲ್ ಅಗತ್ಯವಾಗಿದ್ದು ಈ ಬೆಲೆ ಏರಿಕೆಯಿಂದಾಗಿ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಬಸವರಾಜ್, ದೇವರಾಜೇಗೌಡ, ಉಮೇಶ್, ಕುಮಾರ್ ನಾಯ್ಕ, ವನಶ್ರೀ, ಮೀನಾಕ್ಷಮ್ಮ, ಜಗದೀಶ್, ಮಧು.ಕೆ.ಆರ್ ಮತ್ತಿತರರು ಉಪಸ್ಥಿತರಿದ್ದರು.