ಎನ್.ಆರ್.ಪುರ ಬಸ್ತಿ ಮಠದಲ್ಲಿ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಅವರಿಂದ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್‌ಕುಮಾರ್ ಆಶೀರ್ವಾದ ಪಡೆದರು. ಕೆ.ಪಿ.ಸುರೇಶ್‌ಕುಮಾರ್, ಆರ್.ಡಿ.ಮಹೇಂದ್ರ, ದಿವೀರ್‌ಮಲ್ನಾಡ್, ಅಭಿಗಡಿಗೇಶ್ವರ ಇದ್ದರು.
Published on:
Copied
Follow Us
ಎನ್.ಆರ್.ಪುರ: ಸಿಂಹನಗದ್ದೆ ಬಸ್ತಿಮಠಕ್ಕೆ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್‌ಕುಮಾರ್ ಭೇಟಿ ನೀಡಿ ಜ್ವಾಲಾಮಾಲಿನಿ ದೇವಿಯ ದರ್ಶನ ಪಡೆದರು.
ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗೆ ವಿಶ್ವ ಹಿಂದೂ ಪರಿಷತ್ ಸಂತರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಎನ್.ಆರ್.ಪುರ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಮತಾಂತರ ವ್ಯಾಪಕವಾಗಿ ನಡೆಯುತ್ತಿದೆ. ವಿಶ್ವ ಹಿಂದೂ ಪರಿಷತ್ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಇದರಲ್ಲಿ 8500 ಬ್ಲಾಕ್‌ಗಳಲ್ಲಿ ಧರ್ಮ ಪರಿವರ್ತನೆಯ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಬ್ಲಾಕ್‌ನಲ್ಲಿ ಒಬ್ಬ ಪೂರ್ಣಕಾಲಿಕ ಅನುಭವಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನನ್ನು ಧರ್ಮ ರಕ್ಷಕನಾಗಿ ನಿಯೋಜಿಸಲಾಗಿದೆ.
ಅವರನ್ನು ವಿಶ್ವಹಿಂದೂ ಪರಿಷತ್‌ನ ಇತರ ಕಾರ್ಯಗಳನ್ನು ಮಾಡುವುದನ್ನು ಬಿಟ್ಟು ಎರಡು ವರ್ಷಗಳಲ್ಲಿ ಕೇವಲ ಮತಾಂತರವನ್ನು ತಡೆಗಟ್ಟುವುದು ಹಾಗೂ ಘರ್‌ವಾಪಾಸಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಇದು ಆರಂಭದ ದಿನವಾಗಿದ್ದು 4,500 ಧರ್ಮ ರಕ್ಷಕರು ಸಿಕ್ಕಿದ್ದು ಇವರು 6 ತಿಂಗಳಲ್ಲಿ 50 ಸಾವಿರ ಹಿಂದೂ ಜನರು ಇಸ್ಲಾಂ ಧರ್ಮಕ್ಕೆ ಪರಿವರ್ತನೆಯಾಗುವುದನ್ನು ತಡೆಗಟ್ಟಿದ್ದಾರೆ ಹಾಗೂ ಹಿಂದೂ ಧರ್ಮಕ್ಕೆ ವಾಪಸ್ಸು ಕರೆದು ಕೊಂಡು ಬಂದಿದ್ದಾರೆ ಎಂದರು.
ಹಿಂದೂ ಧರ್ಮದವರು ಹೆದರಿಕೆಯಿಂದ ಹಾಗೂ ಇತರ ಆಮಿಷಗಳಿಗೆ ಬಲಿಯಾಗಿ ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿರುವವರನ್ನು ಹಿಂದೂ ಧರ್ಮಕ್ಕೆ ಕರೆದುಕೊಂಡು ಬರಬೇಕಾಗಿದೆ. ಇಂತಹ ಕಾರ್ಯಕ್ರಮಗಳು ತಾಲೂಕಿನಲ್ಲೂ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಬಸ್ತಿಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್, ವಿಭಾಗೀಯ ಸಂಚಾಲಕ ಆರ್.ಡಿ.ಮಹೇಂದ್ರ, ಜಿಲ್ಲಾ ಕಾರ್ಯದರ್ಶಿ ದಿವೀರ್ ಮಲ್ನಾಡ್, ಶೃಂಗೇರಿ ಸಂಯೋಜಕ ಅಭಿಗಡಿಗೇಶ್ವರ ಇದ್ದರು.