ಚಿಕ್ಕಮಗಳೂರು: ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗಲು ಸಾವಿರಾರು ವರ್ಷಗಳೇ ಬೇಕು. ನಿಧಾನವಾಗಿ ಮಣ್ಣಿನಲ್ಲಿ ವಿಲೀನವಾಗುವ ಪ್ಲಾಸ್ಟಿಕ್ ವಿಷಕಾರಿ ರಾಸಾಯನಿಕಗಳನ್ನು ಮಣ್ಣಿಗೆ ಸೇರಿಸುತ್ತದೆ. ಇದನ್ನು ಅರಿತು ಪ್ರತಿಯೊಬ್ಬರು ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲು ಸ್ವ ನಿರ್ಧಾರ ಕೈಗೊಳ್ಳಬೇಕು ಎಂದು ಆರ್‌ಎಫ್ಓ ಹರೀಶ್ ತಿಳಿಸಿದರು.
ಕಡೂರಿನ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ವಿಜಯವಾಣಿ ದಿನಪತ್ರಿಕೆ ಮತ್ತು ಗುರುಕುಲ ಪಬ್ಲಿಕ್ ಶಾಲೆಯ ಸಹಯೋಗದೊಂದಿಗೆ ನಡೆದ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪರಿಸರ ರಕ್ಷಣೆ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ ಉದ್ದೇಶಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ. ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ದೊಡ್ಡ ಪಿಡುಗಾಗಿದೆ. ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮಗಳ ಕುರಿತು ಜನ ಈಗಿನಿಂದಲೇ ಅರಿವು ಹೊಂದುವ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪಣತೊಡಬೇಕಿದೆ ಎಂದರು.
ನಿರಂತರ ಪರಿಸರ ನಾಶದಿಂದಾಗಿ ಜಾಗತಿಕ ತಾಪಮಾನ ಏರಿಕೆ, ಪರಿಸರ ಮಾಲಿನ್ಯ ದೊಡ್ಡ ಮಟ್ಟದಲ್ಲಿ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕರೆ ನೀಡಿದರು.
ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಸರದ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಪರಿಸರ ಉಳಿಸಲು ಸಾಧ್ಯವಾಗುತ್ತದೆ. ಮಕ್ಕಳು ತಮ್ಮ ಮನೆ ಹಾಗೂ ಶಾಲೆಗಳ ಸುತ್ತಮುತ್ತ ಗಿಡ ನೆಟ್ಟು ಅವುಗಳನ್ನು ಬೆಳೆಸುವ ಕೆಲಸ ಮಾಡಬೇಕು ಎಂದರು.
ಕೃಷಿ ವಿಜ್ಞಾನಿ ಬಿಸಲೇಹಳ್ಳಿ ನಟರಾಜ್ ಮಾತನಾಡಿ, ಅಡಿಕೆ ಸಿಪ್ಪೆಯನ್ನು ರಸ್ತೆ ಬದಿ ಹಾಕಿ ಸುಟ್ಟು ಹಾಕುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಅದೇ ಅಡಕೆ ಸಿಪ್ಪೆಯನ್ನು ಕಾಂಪೋಸ್ಟ್ ಗೊಬ್ಬರವನ್ನಾಗಿಸಿ ರಾಸಾಯನಿಕ ಗೊಬ್ಬರದ ಬದಲು ಕಾಂಪೋಸ್ಟ್ ಗೊಬ್ಬರ ಬಳಕೆ ಮಾಡಿದಲ್ಲಿ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಜೊತೆಗೆ ರೈತರಿಗೆ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಡಕೆ ಬೆಳೆಗಾರರು ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
ಯಾವುದೇ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುವ ಬದಲು ಅವುಗಳನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಆಗ ಪರಿಸರದ ಮೇಲಿನ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ. ಸ್ವಚ್ಛತೆಯ ಬಗ್ಗೆ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಅರಿವು ಮೂಡಿಸುವ ಕೆಲಸ ಮಾಡಬೇಕು. ಆಗ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯವಾಗಲಿದೆ ಇದನ್ನು ಶಾಲೆಯಲ್ಲಿ ಕಲಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪಾಲಕರು ಇದು ತಮ್ಮ ಜವಾಬ್ದಾರಿ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಗುರುಕುಲ ಪಬ್ಲಿಕ್ ಶಾಲೆಯ ಸಂಸ್ಥಾಪಕ
ಕಾರ್ಯದರ್ಶಿ ಸಿ.ಬಿ. ಗಿರೀಶ್ ಮಾತನಾಡಿ, ಸಾರ್ವಜನಿಕರ ಸಹಕಾರವಿದ್ದಾಗ ಮಾತ್ರ ಯಾವುದೇ ಸಾಮಾಜಿಕ ಕಾರ್ಯಗಳು ಯಶಸ್ವಿಯಾಗಲು ಸಾಧ್ಯ. ಸಾರ್ವಜನಿಕರ ಸಹಭಾಗಿತ್ವ ಇಲ್ಲದಿದ್ದಾಗ ಎಷ್ಟೇ ಒಳ್ಳೆಯ ಕೆಲಸ ಮಾಡಿದರು ಅದು ಸಮರ್ಪಕವಾಗಿ ಅನುಷ್ಠಾನವಾಗಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬ ನಾಗರಿಕರು ಪ್ರಜ್ಞಾವಂತರಾಗಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದಾಗ ಮಾತ್ರ ಮುಂದೆ ಉತ್ತಮ ಪರಿಸರ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಪರಿಸರ ದಿನಾಚರಣೆ ಕೇವಲ ಒಂದು ದಿನದ ಕಾರ್ಯಕ್ರಮವಾಗಬಾರದು. ಬದಲಿಗೆ ಪ್ರತಿದಿನವೂ ಪರಿಸರಕ್ಕೆ ಪೂರಕವಾದ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕಿದೆ. ದೊಡ್ಡವರನ್ನು ಎಂದೂ ತಿದ್ದಲು ಸಾಧ್ಯವಿಲ್ಲ. ಆದರೆ ಮಕ್ಕಳಿಗೆ ಶಿಕ್ಷಕನದ ಜೊತೆಗೆ ಪರಿಸರ ಪೂರಕವಾದ ಮಾಹಿತಿ ನೀಡಿದಲ್ಲಿ ಅವರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಶಾಲೆಯ ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ಸಾಹದೊಂದಿಗೆ ಭಾಗವಹಿಸಿದರು. ಶಾಲೆಯ ಮುಂಭಾಗದ ಬಳಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡಗಳನ್ನು ನೆಡಲಾಯಿತು.
ಗುರುಕುಲ ಶಾಲೆಯ ಉಪಾಧ್ಯಕ್ಷೆ ಸ್ವಾತಿ,
ಪ್ರಾಚಾರ್ಯೆ ಜಯಲಕ್ಷ್ಮೀ, ವಿಜಯವಾಣಿ ಜಿಲ್ಲಾ ವರದಿಗಾರ ನಿತ್ಯಾನಂದ್ ಶಿವಗಂಗೆ, ಕಡೂರು ವರದಿಗಾರ ಎಚ್.ಆರ್. ದೇವರಾಜ್, ಪ್ರಸಾರಂಗ ವಿಭಾಗದ ಹರೀಶ್, ಸೋಮಶೇಖರ್, ಜಾಹೀರಾತು ವಿಭಾಗದ ಶರತ್, ಅಕ್ಷತ್,
ಛಾಯಾಗ್ರಹಕ ಯೋಗರಾಜ್, ಪ್ರತಿನಿಧಿ ಅಭಿಷೇಕ್, ಶಿವಣ್ಣ, ತೀರ್ಪುಗಾರರಾದ ಕವಿತಾ ಆನಂದ್, ಚೈತ್ರಾ ಹಾಗೂ ಶಾಲಾ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.