ಬಾಳೆಹೊನ್ನೂರಲ್ಲಿ ಖನಿಜ ಸಂಪತ್ತಿಗೆ ಭೌತಿಕ ಸಮೀಕ್ಷೆ, ಗ್ರಾಮಸ್ಥರ ವಿರೋಧ

ಬಾಳೆಹೊನ್ನೂರಲ್ಲಿ ಖನಿಜ ಸಂಪತ್ತಿಗೆ ಭೌತಿಕ ಸಮೀಕ್ಷೆ, ಗ್ರಾಮಸ್ಥರ ವಿರೋಧ
Published on: 

ಬಾಳೆಹೊನ್ನೂರು: ಖನಿಜ ಸಂಪತ್ತು ಶೋಧಕ್ಕೆ ಲಘು ವಿಮಾನದ ಮೂಲಕ ವೈಮಾನಿಕ ಸರ್ವೇ ನಡೆಸಿದ್ದ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆಯ (ಜಿಎಸ್‌ಐ) ಅಧಿಕಾರಿಗಳು ಪ್ರಸ್ತುತ ಕೆಲವೆಡೆ ಭೌತಿಕ ಸಮೀಕ್ಷೆಗೆ ಮುಂದಾಗಿದ್ದಾರೆ.

ರಾಜ್ಯದಲ್ಲಿ 41ಕಡೆ ಭೂ ವೈಜ್ಞಾನಿಕ ಸಮೀಕ್ಷೆ ನಡೆಯಲಿದ್ದು, ಚಿಕ್ಕಮಗಳೂರಿನ ಮೂರು ಕಡೆ ಸ್ಥಳಕ್ಕೆ ತೆರಳಿ ಮಾದರಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಕೊಪ್ಪ ತಾಲ್ಲೂಕು ಮತ್ತು ಬಾಳೆಹೊನ್ನೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಸೀಳು ಪದರಗಳ ಅಧ್ಯಯನ ನಡೆಸಿ ವಿಷಯಾಧಾರಿತ ನಕ್ಷೆ ತಯಾರಿಸಲು ಯೋಚಿಸಲಾಗಿದೆ ಎನ್ನಲಾಗಿದೆ.

ಕಡೂರು, ಬೀರೂರು ಪ್ರದೇಶದಲ್ಲಿ ಗ್ರಾನೈಟ್‌ನ ಭೌಗೋಳಿಕ ವಿಸ್ತಾರ ಮತ್ತು ಅದರ ಸಂಬಂಧಗಳ ಬಗ್ಗೆ ಅಧ್ಯಯನ ನಡೆಯಲಿದೆ. ಅಲ್ಲಿನ ಖನಿಜಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಬಾಣಾವರ ಮತ್ತು ಭೈರಾಪುರ ಪ್ರದೇಶದಲ್ಲಿ ಚಿನ್ನ, ಬೆಳ್ಳಿಯಂತಹ ಬಿಳಿ ಬಣ್ಣದ ಪರಿವರ್ತನಾ ಲೋಹ, ಕ್ರೋಮಿಯಂ ಸಂಬಂಧಿತ ಖನಿಜಗಳಿಗಾಗಿ ಸಮೀಕ್ಷೆ ನಡೆಯಲಿದೆ.

ರಾಷ್ಟ್ರೀಯ ಭೂ ಭೌತಿಕ ಮ್ಯಾಪಿಂಗ್ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ವಿವಿಧೆಡೆ ಜಿಎಸ್‌ಐ ಅಧಿಕಾರಿಗಳು ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆಯಲ್ಲಿ ದೊರೆತ ಚಿತ್ರಗಳನ್ನು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಮಾದರಿ ಸಂಗ್ರಹಿಸುತ್ತಿದ್ದಾರೆ. ಜಿಎಸ್‌ಐ ಅಧಿಕಾರಿಗಳಿಗೆ ಸಹಕಾರ ನೀಡಲು ಜಿಲ್ಲಾಧಿಕಾರಿಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪತ್ರ ಬರೆದಿದೆ ಎನ್ನಲಾಗಿದೆ.

ಈ ಭೌತಿಕ ಸಮೀಕ್ಷೆಗಾಗಿ ಅಲಿಗೆ ಎಂಬ ಗ್ರಾಮಕ್ಕೆ ಬಂದ ಜಿಎಸ್‌ಐ ಅಧಿಕಾರಿಗಳು ಮಾದರಿ ಸಂಗ್ರಹಿಸಲು ಮುಂದಾದರು. ಈ ವೇಳೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಖಾಸಗಿ ಜಾಗದಲ್ಲಿದ್ದ ಕಲ್ಲು ಒಡೆಯುವ ಕಾರ್ಯಕ್ಕೆ ಮುಂದಾದಾಗ ಗ್ರಾಮಸ್ಥರು ವಿರೋಧಿಸಿ ವಾಪಾಸ್ ಕಳುಹಿಸಿದ್ದಾರೆ. ಅವರು ಯಾರು ಎಂಬುದು ಸರಿಯಾಗಿ ಗೊತ್ತಿಲ್ಲ. ಖಾಸಗಿ ಜಮೀನಿನಲ್ಲಿ ಕಲ್ಲು ಒಡೆಯಲು ವಿರೋಧ ವ್ಯಕ್ತಪಡಿಸಿದೆವು. ಬಳಿಕ ಅವರು ವಾಪಾಸ್ ಹೋಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

ಉಪಗ್ರಹ ಆಧಾರಿತ ಚಿತ್ರಗಳನ್ನು ಆಧರಿಸಿ ಖನಿಜಗಳು ಇರಬಹುದು ಎಂಬ ಅಂದಾಜಿನಲ್ಲಿ ಅಲ್ಲಲ್ಲಿ ಮಣ್ಣು ಮತ್ತು ಕಲ್ಲಿನ ಮಾದರಿ ಸಂಗ್ರಹಿಸುತ್ತಾರೆ. ವಸ್ತುಗಳನ್ನು ಅರ್ಧ ಕೆಜಿಯಷ್ಟು ಮಾತ್ರ ತೆಗೆದುಕೊಂಡು ಹೋಗುತ್ತಾರೆ. ಆದರೆ ಅವರು ಯಾರು? ಏಕೆ ಬಂದಿದ್ದಾರೆ ಎಂಬುದು ಗೊತ್ತಿಲ್ಲದೆ ಸ್ಥಳೀಯರು ವಿರೋಧಿಸಿದ್ದಾರೆ. ಅಂತಹವರಿಗೆ ಸೂಕ್ತ ಮನವರಿಕೆ ಮಾಡಿಕೊಡಲಾಗುತ್ತಿದೆ.

ಕಾರ್ತಿಕ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net