ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ವೇಗದೂತ ಬಸ್‌ಗಳನ್ನು ಹಾಂದಿ, ಕೆಳಗೂರು ಮತ್ತು ವಸ್ತಾರೆಯಲ್ಲಿ ನಿಲುಗಡೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಟಿಸಿಎಲ್ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಭರತ್ ನೇತೃತ್ವದಲ್ಲಿ ಸ್ಥಳೀಯರು ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕೆ.ಭರತ್, ಹಾಂದಿ, ಕೆಳಗೂರು ಹಾಗೂ ವಸ್ತಾರೆಯಲ್ಲಿ ವೇಗದೂತ ಬಸ್‌ಗಳು ನಿಲುಗಡೆ ನೀಡದಿರುವುದರಿಂದ ಇಲ್ಲಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಮೂಡಿಗೆರೆ, ಕೊಟ್ಟಿಗೆಹಾರ, ಉಜಿರೆ, ಧರ್ಮಸ್ಥಳ ಮತ್ತು ಆಲ್ದೂರು, ಚಿಕ್ಕಮಗಳೂರು ಕಡೆ ಕೆಲಸಕ್ಕೆ ಮತ್ತು ಆಸ್ಪತ್ರೆ, ಇನ್ನಿತ್ತರೆ ವ್ಯವಹಾರಗಳಿಗೆ ತೆರಳುವವರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಇಲ್ಲಿನ ಸುತ್ತಮುತ್ತಲ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ನಗರದಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿ ಮತ್ತು ಪಿ.ಜಿಗಳಲ್ಲಿ ಉಳಿದುಕೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಬಹುತೇಕರು ಬಡವರಾಗಿದ್ದು ಕಾಫಿತೋಟಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸಂಸಾರ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ವಾಸ್ತವ್ಯಕ್ಕೆ ಹಣ ಒದಗಿಸುವುದು ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಇಲ್ಲಿ ನಿಲುಗಡೆ ಇಲ್ಲದಿರುವುದರಿಂದ ಜನಸಾಮಾನ್ಯರು ಸಮಯಕ್ಕೆ ಬಸ್ ಸಿಗದ ಕಾರಣ ಬರುವ ವಾಹನಗಳಿಗೆ ಕೈ ಅಡ್ಡ ಹಾಕುವ ಹೀನಾಯ ಪರಿಸ್ಥಿತಿ ಉಂಟಾಗಿದೆ. ಹೆಣ್ಣುಮಕ್ಕಳು ಬಾರಿ ತೊಂದರೆ ಅನುಭವಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ವೇಗದೂತ ಬಸ್‌ಗಳನ್ನು ಶಾಲಾ ಕಾಲೇಜು, ವ್ಯವಹಾರಿಕ ಸಮಯವನ್ನು ಸರಿದೂಗಿಸಿಕೊಂಡು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಳಗೂರು, ಹಾಂದಿಯಲ್ಲಿ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಪ್ಪ, ಮಂಜಯ್ಯ, ಚಂದ್ರು, ರೋಹಿತ್, ಚಿದಾನಂದ ಸೇರಿದಂತೆ ಇತರರು ಇದ್ದರು.