ಪಾಲಕರೇ, ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಕಲಿಸಿ

ಶೃಂಗೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಸ್‌ಸಿ, ಪಿಯುಸಿ ಮತ್ತು ಸಿಬಿಎಸ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಶೃಂಗೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಸ್‌ಸಿ, ಪಿಯುಸಿ ಮತ್ತು ಸಿಬಿಎಸ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
Published on
ಶೃಂಗೇರಿ: ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬುದಕ್ಕೆ ನಮ್ಮ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದೇ ಸಾಕ್ಷಿ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಆರ್.ಅರುಣಕುಮಾರ್ ಹೇಳಿದರು.
ಪಟ್ಟಣದ ಶಾಂತ ಶೃಂಗ ಸೌಹಾರ್ದ ಸಹಕಾರ ಸಂಘದ ಸಭಾಂಗಣದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಸಿಬಿಎಸ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ನಾವು ಪಡೆಯುವ ಶಿಕ್ಷಣದೊಂದಿಗೆ ಸಂಸ್ಕಾರ, ಮಾನವೀಯ ಗುಣ ಬೆಳೆಸಿಕೊಳ್ಳಬೇಕು. ಪುಸ್ತಕದ ಜ್ಞಾನದ ಜತೆಗೆ ಸಾಮಾನ್ಯ ಜ್ಞಾನ ಸಂಪಾದಿಸಿ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದರು.
ಉದ್ಯಮಿ ಉಮೇಶ್ ಪುದುವಾಳ್ ಮಾತನಾಡಿ, ಶಾಲೆಯಲ್ಲಿ ಗಳಿಸಿದ ಜ್ಞಾನ ಸಮಾಜಕ್ಕೆ ಉಪಯೋಗವಾಗಬೇಕು. ನಿಮ್ಮ ಪಾಲಕರು ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡಿರುವುದನ್ನು ಮರೆಯಬಾರದು. ನಿಮಗೆ ಪಾಠ ಹೇಳಿದ ಗುರುವನ್ನು ನೆನಪಿನಲ್ಲಿ ಇಟ್ಟುಕೊಂಡು ಅವರಿಗೆ ಚಿರಋಣಿಯಾಗಿರಬೇಕು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳಿಸಿದ ಜ್ಞಾನಭಾರತಿ ಶಾಲೆಯ ನವಮಿ, ದರ್ಶಿನಿ ಪ್ರೌಢಶಾಲೆಯ ಅನರ್ಘ, ಸಿಬಿಎಸ್ಸಿಯಲ್ಲಿ ಎಸ್.ವಿ.ಶ್ರೀನಿಧಿ, ಪಿಯುಸಿಯಲ್ಲಿ ಅಂಕಿತಾ, ಛವಿ ಮರಾಠೆ, ಅದಿತಿ ಹೆಬ್ಬಾರ್ ಅವರನ್ನು ಗೌರವಿಸಲಾಯಿತು. ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಅಧ್ಯಕ್ಷ ಎ.ಎಂ.ಶ್ರೀಧರ ರಾವ್, ಯುವ ಘಟಕದ ಕಾರ್ಯದರ್ಶಿ ಆದಿತ್ಯ ಶೆಟ್ಟಿಹಳ್ಳಿ, ಹೆಬ್ಬಿಗೆ ವಿಶ್ವನಾಥ ರಾವ್, ಗುಬ್ಬಗೋಡು ವೆಂಕಟರಾವ್, ಎಚ್.ಜಿ.ಕೃಷ್ಣಮೂರ್ತಿ, ರಾಜೇಂದ್ರ, ಸೌಮ್ಯ ವಿಜಯಕುಮಾರ್, ಉದಯ ಚೌಕಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net