ಮಲೆನಾಡಿನಲ್ಲಿ ತಾಳೆ ಕೃಷಿ ಲಾಭದಾಯಕ

ಮೂಡಿಗೆರೆ ತಾಲೂಕಿನ ಹಿರೇಶಿಗರ ಗ್ರಾಮದಲ್ಲಿ ತಾಳೆ ಬೆಳೆಗೆ ಯೋಗ್ಯವಾದ ಪ್ರದೇಶವನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಪರಿಶೀಲನೆ ನಡೆಸಿದರು. ಮಂಗಳಾ, ಡಾ. ಅರುಣ್ ಬಸಪ್ಪ, ದಿವ್ಯಾ, ಡಾ. ವಿ.ಪ್ರತಾಪ್ ಇತರರಿದ್ದರು.
ಮೂಡಿಗೆರೆ ತಾಲೂಕಿನ ಹಿರೇಶಿಗರ ಗ್ರಾಮದಲ್ಲಿ ತಾಳೆ ಬೆಳೆಗೆ ಯೋಗ್ಯವಾದ ಪ್ರದೇಶವನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಪರಿಶೀಲನೆ ನಡೆಸಿದರು. ಮಂಗಳಾ, ಡಾ. ಅರುಣ್ ಬಸಪ್ಪ, ದಿವ್ಯಾ, ಡಾ. ವಿ.ಪ್ರತಾಪ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಡಿಕೆಗೆ ಉತ್ತಮ ಪರ್ಯಾಯ ಬೆಳೆ
  • ತೋಟಗಾರಿಕೆ ಇಲಾಖೆ, ಜಂಟಿ ನಿರ್ದೇಶಕಿ, ಮಂಗಳಾ ಮಾಹಿತಿ
ಮೂಡಿಗೆರೆ: ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಕಾರಣ ರೈತರು ಹೈರಾಣಾಗಿದ್ದಾರೆ. ಕಾಡುಪ್ರಾಣಿಗಳ ಹಾವಳಿ, ಕಾರ್ಮಿಕರ ಕೊರತೆಯಿಂದ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಅಡಿಕೆಗೆ ಹಳದಿ ರೋಗ ಬಾಧೆಯಿಂದ ಕಂಗೆಟ್ಟಿರುವ ರೈತರು ತಾಳೆ ಕೃಷಿಯತ್ತ ಆಸಕ್ತಿ ತೋರುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಮಂಗಳಾ ಹೇಳಿದರು.
ಹಿರೇಶಿಗಿರ, ಕಲಕೋಡು, ಬಸ್ಕಲ್ ತೋಟಗಾರಿಕೆ ಇಲಾಖೆ ಮತ್ತು ರೈತರ ತಂಡದಿಂದ ಮಂಗಳವಾರ ತಾಳೆ ಬೆಳೆ ವೀಕ್ಷಿಸಿ ಮಾತನಾಡಿ, ತಾಲೂಕಿನಲ್ಲಿ ತಾಳೆ ಬೆಳೆಯುವ ಪ್ರದೇಶ ವಿಸ್ತಾರಗೊಳ್ಳುತ್ತಿದೆ. ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಳದಿ ರೋಗ ಮತ್ತು ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಗೆ ಹೆಚ್ಚುತ್ತಿರುವ ಬೇಡಿಕೆ, ಉತ್ತಮ ಧಾರಣೆ ತಾಳೆ ಕೃಷಿಗೆ ಪ್ರಮುಖ ಕಾರಣವಾಗಿದೆ ಎಂದರು.
ತಾಳೆ ಬೆಳೆ ಪ್ರದೇಶ ವಿಸ್ತರಣೆ ನಿಟ್ಟಿನಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆ ಬೆಳೆ ಯೋಜನೆಯಡಿ ರೈತರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ತೋಟಗಾರಿಕಾ ಇಲಾಖೆಯಲ್ಲಿ ತಾಳೆ ಸಸಿ ಲಭ್ಯವಿದೆ. ಅದನ್ನು ಉಚಿತವಾಗಿ ರೈತರಿಗೆ ನೀಡಲಾಗುವುದು. ಸಸಿಗಳ  ನಿರ್ವಹಣೆ ಹಾಗೂ ಕೃಷಿಗೆ ಸರ್ಕಾರದಿಂದ ಪ್ರೋತ್ಸಾಹಧನ ನೀಡಲಾಗುತ್ತದೆ. ಒಮ್ಮೆ ತಾಳೆ ಸಸಿ ನಾಟಿ ಮಾಡಿದರೆ ಸುಮಾರು 35 ವರ್ಷದವರೆಗೆ ನಿರಂತರ ಆದಾಯ ಪಡೆಯಬಹುದು. ಸುಧಾರಿತ ತಳಿಗಳು 2ರಿಂದ 3 ವರ್ಷದಲ್ಲಿ ಫಸಲಿಗೆ ಬರುತ್ತವೆ. ಇತರೆ ಬೆಳೆಗಳಿಗೆ ಹೋಲಿಸಿದರೆ ತಾಳೆಗೆ ರೋಗ ಮತ್ತು ನಿರ್ವಹಣಾ ವೆಚ್ಚ ಕಡಿಮೆಯಾಗಿದೆ. ಸಸಿ ನಾಟಿ ಮಾಡಿದ 3ನೇ ವರ್ಷದಿಂದ ಇಳುವರಿ ಆರಂಭವಾಗಿ 30 ವರ್ಷದ ತನಕ 15 ದಿನಕ್ಕೊಮ್ಮೆ ಹಣ್ಣು ಕಟಾವಿಗೆ ಬರುತ್ತದೆ. ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ 5 ಟನ್ ಇಳುವರಿ ಬರುತ್ತದೆ ಎಂದು ತಿಳಿಸಿದರು.
ನವೆಂಬರ್‌ಲ್ಲಿ ಜಲಕ್ಷಾಮದ ಭೀತಿ ಎದುರಾಗುವ ಸಾಧ್ಯತೆಯಿದೆ. ತಾಳೆ ಮರಗಳಿಗೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಅಡಿಕೆಗೆ ಹಳದಿಎಲೆ ರೋಗ ಹಾಗೂ ಬೆಲೆ ಕುಸಿತ ಉಂಟಾದಾಗ, ಮಲೆನಾಡಿನಲ್ಲಿ ತಾಳೆ ಬೆಳೆ ಉತ್ತಮವಾದ ಪರ್ಯಾಯ ಬೆಳೆಯಾಗುತ್ತದೆ. ಹವಾಮಾನದ ಏರುಪೇರಿಗೆ ಸೆಡ್ಡು ಹೊಡೆದು ರೈತರ ಕೈಹಿಡಿಯುತ್ತದೆ. ಭಾರತ ಅತಿದೊಡ್ಡ ತಾಳೆ ಎಣ್ಣೆ ಆಮದುದಾರ ರಾಷ್ಟ್ರವಾಗಿದೆ. 2015ರಿಂದ ತಾಳೆ ಎಣ್ಣೆಗೆ ಪ್ರತಿ ವರ್ಷ 100 ಬಿಲಿಯನ್ ಡಾಲರ್ ಖರ್ಚು ಮಾಡುತ್ತಿದೆ. ಇದು ಚಿನ್ನವನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದಕ್ಕಿಂತ ದುಬಾರಿ ವೆಚ್ಚವಾಗಿದೆ. ಇದನ್ನು ಕಡಿಮೆ ಮಾಡಲು ರೈತರು ತಾಳೆ ಬೆಳೆಯಬೇಕು ಎಂದು ಐಸಿಎಆರ್ ವಿಭಾಗದ ಕೃಷಿ ವಿಜ್ಞಾನಿ ಡಾ. ಅರುಣ್ ಸುಬ್ಬಣ್ಣ ತಿಳಿಸಿದರು.
ತಾಳೆ ಬೆಳೆ ಬೆಳೆಯಲು ಕಾರ್ಮಿಕರ ಅಗತ್ಯವಿಲ್ಲ. 1 ಎಕರೆ ಜಾಗದಲ್ಲಿ ತಾಳೆ ಬೆಳೆದರೆ ಉತ್ತಮ ಇಳುವರಿ ಪಡೆದು ರೈತರು ಹಣದ ಮುಗ್ಗಟ್ಟಿನಿಂದ ಹೊರಬರಲು ಅವಕಾಶವಿದೆ. ತಾಳೆ ಸಸಿ ನಾಟಿ ಮಾಡಿದಾಗ ಆರಂಭದಲ್ಲಿ ಹೆಗ್ಗಣ ಮತ್ತು ಇಲಿಗಳ ಕಾಟ ತಪ್ಪಿಸಿದರೆ ಸಸಿ ಬೆಳೆಯಲು ಸುಲಭವಾಗುತ್ತದೆ. ಕೃಷಿ ವಿಜ್ಞಾನಿಗಳು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಪಡೆದರೆ ಉತ್ತಮ ಫಸಲು ಪಡೆಯಲು ಸಾಧ್ಯವಿದೆ. ಫಸಲು ಆರಂಭವಾಗಲು 3 ವರ್ಷ ಕಾಯಬೇಕು. ತಾಳೆಯೊಂದಿಗೆ ಪರ್ಯಾಯ ಬೆಳೆಯನ್ನು ಕೃಷಿಯತ್ತ ರೈತರು ಹೋಗಬಹುದು ಎಂದು ತಾಳೆ ಬೆಳೆ ಕೃಷಿಕ ಗೌತುವಳ್ಳಿ ರೇಣುಕುಮಾರ್ ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net