ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಆಧಾರದ ಮೇಲೆ ಕರ್ನಾಟಕದ 20,668 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಸಿ ಕರಡು ಅಧಿಸೂಚನೆ ಹೊರಡಿಸಿದ್ದು, ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದ ಜಾಗ ತುಂಬ ಹೆಚ್ಚಾಗಿದೆ. ತಾಲೂಕಿನ ಅರಳಿಕೊಪ್ಪ, ಬಾಳೆಹೊನ್ನೂರು, ಬೈರಾಪುರ, ದಂಡುಬಿಟ್ಟಹಾರ, ದಾವಣ, ಗುಬ್ಬಿಗಾ ಸೇರಿದಂತೆ 30 ಹಳ್ಳಿಗಳು ಸೇರಿವೆ. ಈ ವರದಿಯೇ ಅವೈಜ್ಞಾನಿಕವಾಗಿದ್ದು, ಭೌತಿಕ ಸಮೀಕ್ಷೆ ನಡೆಸದೆ, ಸ್ಥಳ ಪರಿಶೀಲನೆ ಮಾಡದೆ, ಸರ್ವೇ ನಂಬರ್ ಸಹ ಸೇರಿಸದೆ ಕೇವಲ ಉಪ ಗ್ರಹದ ಆಧಾರದ ಮೇಲೆ ಕೃಷಿ ಭೂಮಿ, ಕಾಫಿ ತೋಟಗಳನ್ನೆಲ್ಲ ಪರಿಸರ ಸೂಕ್ಷ್ಮ ಪ್ರದೇಶ ಎಂದು ಸೇರಿಸಿದ್ದು ಮಲೆನಾಡಿನ ರೈತರ ಬದುಕು ಹಾಗೂ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ಎನ್.ಆರ್.ಪುರ ಹೊಸ ರೈಲು ಮಾರ್ಗದ ನಿರ್ಮಾಣಕ್ಕೂ ಈ ಪರಿಸರ ಸೂಕ್ಷ್ಮ ಪ್ರದೇಶದ ಕಟ್ಟುಪಾಡುಗಳು ತೊಡಕಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಎನ್.ಆರ್.ಪುರ ರೈಲ್ವೆ ಹೋರಾಟ ಸಮಿತಿ ಸಹ ಆಕ್ಷೇಪಣೆ ಸಲ್ಲಿಸುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.