ಬಹಳ ವರ್ಷಗಳಿಂದಲೂ ಎನ್.ಆರ್.ಪುರ ಮಾರ್ಗವಾಗಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅನೇಕರು ಒತ್ತಡ ಹೇರಿದ್ದರು. ಎಚ್.ಡಿ.ದೇವೇಗೌಡ ಪ್ರಧಾನಿಯಾದಾಗಿನಿಂದಲೂ ರೈಲ್ವೆ ಮಾರ್ಗಕ್ಕೆ ಒತ್ತಡ ಹೇರಲಾಗುತ್ತಿತ್ತು. ಅದರ ಫಲವಾಗಿ ಮಾರ್ಗದ ಸಮೀಕ್ಷೆಗಾಗಿ ಅನುದಾನ ಮೀಸಲಿಡಲಾಗಿತ್ತು. ಕೆ.ಎಚ್.ಮುನಿಯಪ್ಪ ರೈಲ್ವೆ ಮಂತ್ರಿಯಾಗಿದ್ದಾಗಲೂ ಈ ಮಾರ್ಗಕ್ಕೆ ಭರವಸೆ ಮೂಡಿತ್ತು. ಕೆ.ಜಯಪ್ರಕಾಶ್ ಹೆಗ್ಡೆ ಸಂಸದರಾಗಿದ್ದಾಗಲೂ ಸದನದಲ್ಲಿ ಪ್ರಸ್ತಾಪ ಮಂಡಿಸಿದ್ದರು. ನಂತರ ಸದಾನಂದ ಗೌಡ ಅವರು ರೈಲ್ವೆ ಮಂತ್ರಿಯಾಗಿದ್ದಾಗಲೂ ಪ್ರಸ್ತಾಪ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಶಿವಮೊಗ್ಗ, ಎನ್.ಆರ್.ಪುರ, ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ರೈಲ್ವೆ ಮಾರ್ಗ ನಿರ್ಮಾಣವಾಗುತ್ತದೆ ಎಂಬ ಸುದ್ದಿ ಕೇಳಿ ಈ ಭಾಗದ ಜನರು ಪಟ್ಟ ಖುಷಿ ಅಷ್ಟಿಷ್ಟಲ್ಲ. ಆದರೆ ಇದೀಗ ಮಾರ್ಗವನ್ನೇ ಬದಲಾಯಿಸಿ ಬೇರೆ ಮಾರ್ಗದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಳಿಬರುತ್ತಿದೆ. ಯೋಜನೆ ಇದೀಗ ಶಿವಮೊಗ್ಗ, ಅರಸಾಳು, ಹೊಸನಗರ, ರಿಪ್ಪನ್‌ಪೇಟೆ, ತೀರ್ಥಹಳ್ಳಿ, ಕೋಣಂದೂರು, ಕಮ್ಮರಡಿ, ಶೃಂಗೇರಿ, ಕೆರೆಕಟ್ಟೆ ಮಾರ್ಗವಾಗಿ ಮಂಗಳೂರು ತಲುಪುವ ಯೋಜನೆಯಾಗುವ ಮಾಹಿತಿ ತಿಳಿದುಬಂದಿದೆ.