

ಚಿಕ್ಕಮಗಳೂರು: ಈದ್ ಮಿಲಾದ್ ಮೆರವಣಿಗೆಯ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಟಿಪ್ಪು ಕಟೌಟ್‌ನ ವಿಡಿಯೋಗೆ ದೇಶವಿರೋಧಿ ಹಾಡು ಬಳಕೆ ಮಾಡಲಾಗಿದೆ ಎಂಬ ಆರೋಪದ ಕುರಿತು ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ, ಚಿಕ್ಕಮಗಳೂರಿನಲ್ಲಿ ಮತ್ತೊಂದು ಘಟನೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಈದ್ ಮಿಲಾದ್ ಮೆರವಣಿಗೆಯ ಹಿನ್ನೆಲೆಯಲ್ಲಿ ನಗರದ ಟಿಪ್ಪು ನಗರದಲ್ಲಿ ‘ಐ ಲವ್ ಮೊಹಮ್ಮದ್’ ಎಂಬ ಬರಹವಿರುವ ಬ್ಯಾನರ್ ಅಳವಡಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ಈದ್ ಮಿಲಾದ್ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಇದೇ ರೀತಿಯ ಬ್ಯಾನರ್ ಬಳಕೆಯಾಗಿದ್ದು, ಬಳಿಕ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಈ ಘೋಷವಾಕ್ಯ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಉನ್ ನಬಿ ಸಂದರ್ಭದಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಮೆರವಣಿಗೆಯಲ್ಲಿ ‘ಐ ಲವ್ ಮೊಹಮ್ಮದ್’ ಎಂಬ ಬ್ಯಾನರ್‌ಗಳನ್ನು ಬಳಸಲಾಗಿತ್ತು. ನಂತರ ಈ ಘೋಷವಾಕ್ಯ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕವಾಗಿ ಹರಿದಾಡಿತ್ತು.
ಕಾನ್ಪುರದ ಘಟನೆ ಬಳಿಕ ಮುಂಬೈ, ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರದ ನಾಗ್ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದೇ ಘೋಷವಾಕ್ಯವನ್ನು ಒಳಗೊಂಡ ರ್ಯಾಲಿಗಳು ಹಾಗೂ ಕಾರ್ಯಕ್ರಮಗಳು ನಡೆದಿದ್ದವು. ಇದರಿಂದ ಕೆಲವೆಡೆ ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿದ್ದವು.
ಕರ್ನಾಟಕದಲ್ಲಿ ‘ಐ ಲವ್ ಮೊಹಮ್ಮದ್’ ಬ್ಯಾನರ್ ಅಥವಾ ಘೋಷವಾಕ್ಯಕ್ಕೆ ಸಂಬಂಧಿಸಿದ ವಿವಾದ ಇದೇ ಮೊದಲಲ್ಲ. ಈ ಹಿಂದೆ ಬೆಳಗಾವಿ, ದಾವಣಗೆರೆ, ಆಳಂದ ಸೇರಿದಂತೆ ರಾಜ್ಯದ ವಿವಿಧೆಡೆ ಇಂತಹ ಘಟನೆಗಳು ವರದಿಯಾಗಿದ್ದವು. ಕೆಲವು ಪ್ರಕರಣಗಳಲ್ಲಿ ಪೊಲೀಸ್ ದೂರುಗಳು ಹಾಗೂ ಪ್ರಕರಣಗಳೂ ದಾಖಲಾಗಿದ್ದು, ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದ್ದವು.
ಇದೀಗ ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಇಂತಹ ಬ್ಯಾನರ್ ಅಳವಡಿಕೆಯಾಗಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಮುಂದಿನ ಕ್ರಮದತ್ತ ಇದೀಗ ಗಮನ ಹರಿದಿದೆ.