

ಎನ್.ಆರ್.ಪುರ: ಸರ್ಕಾರ ಅಡುಗೆ ಸಹಾಯಕರಿಗೆ ಸರಿಯಾಗಿ ಸಂಬಳ ನೀಡದೆ, ಅತ್ಯಂತ ಕೀಳಾಗಿ ಕಾಣುತ್ತಿದೆ ಎಂದು ಹಿರಿಯ ಅಡುಗೆ ತಯಾರಕಿ ಅನ್ನಪೂರ್ಣ ಆರೋಪಿಸಿದರು.
ಅಡುಗೆ ತಯಾರಕ ಮಹಿಳೆಯರನ್ನು ಕೆಲಸದಿಂದ ಬಿಡಿಸಿ ಎನ್‌ಜಿಒ ಖಾಸಗಿ ಸಂಸ್ಥೆಗಳಿಗೆ ನೀಡುವ ಹುನ್ನಾರ ವಿರೋಧಿಸಿ ತಾಲೂಕಿನ ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತೆಯರ ೆಡರೇಷನ್‌ನಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಸರ್ಕಾರ ನಮಗೆ ಸರಿಯಾಗಿ ವೇತನ ನೀಡುವುದಿಲ್ಲ. ಕಳೆದ ಎರಡು ತಿಂಗಳ ಗೌರವ ಧನದಲ್ಲಿ 1 ಸಾವಿರ ಕಡಿಮೆ ಹಾಕಿದ್ದಾರೆ. 25 ವರ್ಷಗಳಿಂದ ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಡುಗೆಯವರಾಗಿ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರನ್ನು ಕೆಲಸದಿಂದ ಬಿಡಿಸಿ ಎನ್‌ಜಿಒ ಖಾಸಗಿ ಸಂಸ್ಥೆಗಳಿಗೆ ನೀಡಿ ಬಿಸಿಯೂಟ ಯೋಜನೆ ನಿರ್ವಹಿಸುವ ಹುನ್ನಾರ ನಡೆಸಿದೆ ಎಂದು ದೂರಿದರು.
ಶಿಕ್ಷಕರ ಕೆಲಸ ಕಡಿಮೆ ಕ್ಲಸ್ಟರ್ ಮಟ್ಟದ ಅಡುಗೆ ಕೇಂದ್ರ ನಿರ್ಮಿಸಿ ಉಳಿದ ಶಾಲೆಗಳಿಗೆ ವಿತರಿಸಲು ಮುಂದಾಗಿರುವುದು ಖಂಡನೀಯ. ನಾವು ಈ ಕೆಲಸ ನಂಬಿಕೊಂಡು ಬದುಕುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಧ್ಯಾಹ್ನ ಉಪಹಾರ ಯೋಜನೆ, ರಾಜ್ಯ ನಿರ್ದೇಶಕರು, ಶಿಕ್ಷಕರ ಸಂಘ ಕೊಟ್ಟಿರುವ ಮನವಿ ನೆಪವಾಗಿಟ್ಟುಕೊಂಡು ಏಕ ಪಕ್ಷೀಯವಾಗಿ ತೀರ್ಮಾನಿಸಿರುವುದನ್ನು ಖಂಡಿನೀಯ ಎಂದರು.
ತಾಲೂಕು ಯೋಜನಾ ಅಧಿಕಾರಿ ಬಿ.ವಿ.ಯಾದವರಾಜ್ ಹಾಗೂ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ್‌ಗೆ ಮನವಿ ಸಲ್ಲಿಸಿದರು. ತಾಲೂಕು ಸಂಘದ ಅಧ್ಯಕ್ಷೆ ಲೀಲಾವತಿ, ಕಾರ್ಯದರ್ಶಿ ಮಂಜುಳಾ, ಪದಾಧಿಕಾರಿಗಳಾದ ಇಂದ್ರಮಣಿ, ದೀಪ್ತಿ, ಪ್ರೇಮ, ಮಮತಾ, ಶಾಂತಿ, ರೇಖಾ, ನಾಗರತ್ನ, ಚೈತ್ರಾ, ಸರಸ್ವತಿ, ಪರ್ವೀನ್‌ಭಾನು, ಬಲ್ಕೀಸ್‌ಬಾನು, ರಹಮತ್, ಆಮಿನ ಮತ್ತಿತರರು ಇದ್ದರು.