ಕಡೂರು: ಗ್ರಾಮದಲ್ಲಿ ಸರಿಯಾದ ರೀತಿಯಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯವಹಿಸುತ್ತಿರುವ ನಾಗರಾಳು ಗ್ರಾಮ ಪಂಚಾಯತಿ ಆಡಳಿತ ವೈಖರಿ ಖಂಡಿಸಿ ಗ್ರಾಮಸ್ಥರು ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಎನ್.ಸಿ.ಚಂದ್ರಶೇಖರ ಮಾತನಾಡಿ, ಗ್ರಾಮದ ಸಮಸ್ಯೆ ಆಲಿಸಬೇಕಾದ ಪಂಚಾಯಿತಿ ಅಧಿಕಾರಿಗಳು ಯಾವುದೇ ರೀತಿಯ ಸ್ಪಂದನೆಯಿಲ್ಲದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಗ್ರಾಮದಲ್ಲಿ ಎರಡು ವರ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದೆ ಹೋಚಿಹಳ್ಳಿ, ನಿಡಘಟ್ಟ ಗ್ರಾಮಗಳಿಗೆ ತೆರಳಿ ನೀರು ತರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳ ಬಳಿ ಸಾಕಷ್ಟು ಬಾರಿ ಕುಡಿಯುವ ನೀರಿನ ವಿಚಾರದಲ್ಲಿ ಮನವಿ ಮಾಡಿಕೊಂಡರೂ ಪ್ರಯೋಜನವಗಿಲ್ಲ ಎಂದು ದೂರಿದರು.
ಗ್ರಾಮದಲ್ಲಿ ಚರಂಡಿ ಮತ್ತಿತರರ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ತಾಪಂ ಇಒ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟುಹಿಡಿದು ಪ್ರತಿಭಟಿಸಿದರು.
ಸಖರಾಯಪಟ್ಟಣ ಪಿಎಸ್‌ಐ ಪವನ್ ಕುಮಾರ್ ಭೇಟಿ ನೀಡಿ, ಪ್ರತಿಭಟನಾಕಾರರನ್ನು ಮನವೊಲಿಸಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಡುವ ಪ್ರಯತ್ನ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದಾಗ ಬೀಗ ಹಾಕಿದ ಕಚೇರಿ ತೆರೆದ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಪ್ರಕಾಶ್ ಮಾತನಾಡಿ, ಈಗಾಗಲೇ ತಮ್ಮ ಇಲಾಖೆಯಿಂದ ಗ್ರಾಮದಲ್ಲಿ ಶುದ್ಧ ಕುಡಿಯುವ ಘಟಕದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕುಡಿಯುವ ನೀರು ವಿತರಣೆಯಲ್ಲಿ ಪಂಚಾಯಿತಿ ಕಡೆಯಿಂದ ವ್ಯತ್ಯಾಸ ಕಂಡುಬಂದಿದ್ದು ಸಮಸ್ಯೆ ಬಗೆಹರಿಸಿಕೊಳ್ಳಲು ಪಿಡಿಒಗೆ ಸೂಚನೆ ನೀಡಲಾಗಿದೆ ಎಂದರು.