ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವು ತೇಜಸ್ವಿ ಅವರ ಚಿಂತನೆ, ಬರಹ, ಬದುಕಿನ ಸಾಕಾರಗೊಳಿಸುವ ಕಾರ್ಯನಿರ್ವಹಿಸುತ್ತಿದೆ. ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ, ಚಿಟ್ಟೆ ಉದ್ಯಾನ, ಗಾಜಿನ ಓದಿನ ಮನೆ ಮತ್ತು ಆರ್ಕಿಡ್ ಲೋಕ ಇಲ್ಲಿನ ಪ್ರಮುಖ ಆಕರ್ಷಣೆ. ಕೀಟ ಸಂಗ್ರಹಾಲಯದಲ್ಲಿ ಕಾಣ ಸಿಗುವ ಕೀಟಗಳು ಕೀಟಜಗತ್ತಿನ ವಿಸ್ಮಯವನ್ನು ತೆರೆದಿಡುತ್ತವೆ. ಮಲೆನಾಡಿನ ಜನಜೀವನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಸ್ತುಗಳ ಸಂಗ್ರಹವಿದ್ದು ಇದರ ಜತೆಗೆ ತೇಜಸ್ವಿ ಅವರ ಆಸಕ್ತಿಯ ಕ್ಷೇತ್ರಗಳಿಗೆ ಸಂಬಂಧಿಸಿದ ವಸ್ತುಗಳಾದ ಕ್ಯಾಮರಾ, ಟೈಪ್‌ರೈಟರ್ ಮುಂತಾದ ವಸ್ತುಗಳನ್ನು ನೋಡಬಹುದಾಗಿದೆ. ಇದರ ಜತೆಗೆ ಅಪರೂಪದ ನಾಣ್ಯಗಳು, ಆಯುಧಗಳು ಕಾಣಸಿಗುತ್ತವೆ. ಚಿಟ್ಟೆ ಉದ್ಯಾನದಲ್ಲಿ ಚಿಟ್ಟೆಗಳಿಗೆ ಸಂಬಂಧಿಸಿದ ಸಸ್ಯಗಳನ್ನು ಹಾಕಲಾಗಿದ್ದು ತೇಜಸ್ವಿ ಪ್ರತಿಷ್ಠಾನದಲ್ಲಿ ಸಾಮಾನ್ಯವಾಗಿ ಕಂಡುಬರುವ ಚಿಟ್ಟೆಗಳ ಮಾಹಿತಿಯನ್ನು ಉದ್ಯಾನದಲ್ಲಿ ಕಾಣಬಹುದು. ಆರ್ಕಿಡ್ ಲೋಕದಲ್ಲಿ ಆರ್ಕಿಡ್‌ಗಳ ಮಹತ್ವ, ಸಂರಕ್ಷಣೆ ಮತ್ತು ವೈವಿಧ್ಯತೆಯನ್ನು ಕುರಿತ ಮಾಹಿತಿಗಳಿದ್ದು ಬಗೆಬಗೆಯ ಆರ್ಕಿಡ್‌ಗಳನ್ನು ನೋಡಬಹುದಾಗಿದೆ. ಗಾಜಿನ ಓದಿನ ಮನೆಯಲ್ಲಿ ಸುತ್ತ ಕಣ್ಣು ಹಾಯಿಸಿದಷ್ಟೂ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವಂತೆ ಗಾಜಿನ ಗೋಡೆಗಳನ್ನು ನಿರ್ಮಿಸಲಾಗಿದ್ದು ಪ್ರಶಾಂತ ಪರಿಸರದಲ್ಲಿ ಪುಸ್ತಕಗಳನ್ನು ಓದಬಹುದಾಗಿದೆ. ತೇಜಸ್ವಿ ಅವರ ಪುಸ್ತಕಗಳು, ತೇಜಸ್ವಿ ಅವರ ಆಸಕ್ತಿಯ ಕ್ಷೇತ್ರಗಳಾದ ಪರಿಸರ, ಜೀವಜಗತ್ತು, ಬಾಹ್ಯಾಕಾಶ, ಚಿತ್ರಕಲೆ, ಪಕ್ಷಿಲೋಕ ಮುಂತಾದವುಗಳ ಕುರಿತ ಕೃತಿಗಳು ಓದಲು ಸಿಗುತ್ತವೆ. ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ಅವರ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರಕುತ್ತವೆ. ನಾಟಕ, ವಿಚಾರ ಸಂಕಿರಣ, ಸಂವಾದ, ಚಿತ್ರಕಲಾ ಶಿಬಿರ, ಚಾರಣ ಮುಂತಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ.