ಹಿಂದೂಗಳ ಭಾವನೆ ದುರುಪಯೋಗಪಡಿಸಿಕೊಂಡು ಹಣ ಲೂಟಿ

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ.ಮಂಜೇಗೌಡ
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ.ಮಂಜೇಗೌಡ
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೂಗಳ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಹಣ ಲೂಟಿ
  • ಬಿಜೆಪಿ ಇನ್ನು ಮುಂದೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದೆ
ಚಿಕ್ಕಮಗಳೂರು: ಶ್ರೀರಾಮನ ಹೆಸರಿನಲ್ಲಿ ಹಿಂದೂಗಳ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಹಣ ದೋಚಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಬಿಜೆಪಿ ಇನ್ನು ಮುಂದೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ.ಮಂಜೇಗೌಡ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರ್ಯಾದ ಪುರುಷೋತ್ತಮ ಶ್ರೀರಾಮನ ಹೆಸರಿನಲ್ಲಿ ಸಂಗ್ರಹಿಸಲಾದ ಕೋಟ್ಯಂತರ ರೂಪಾಯಿಯಲ್ಲಿ ಯಾರಿಗೆ ಎಷ್ಟು ಪಾಲು ಹೋಗಿದೆ ಎಂಬುದನ್ನು ದೇಶದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ರಾಮ ಮಂದಿರದ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತರಾತುರಿಯಲ್ಲಿ ಉದ್ಘಾಟನೆ ನಡೆಸಿದ್ದು ಟ್ರಸ್ಟ್‌ಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಎಂಬ ಅನುಮಾನ ಈಗ ಸಾರ್ವಜನಿಕರಲ್ಲಿ ಮೂಡಿದೆ ಎಂದು ಟೀಕಿಸಿದರು.
ದೇಶದಾದ್ಯಂತ ರಾಮಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಲಾದ ಇಟ್ಟಿಗೆ, ಕಬ್ಬಿಣ ಸೇರಿದಂತೆ ಭಕ್ತರು ನೀಡಿದ ಕಾಣಿಕೆಗಳ ಲೆಕ್ಕವನ್ನು ಬಿಜೆಪಿ ಹಾಗೂ ಸಂಬಂಧಪಟ್ಟವರು ಬಹಿರಂಗಪಡಿಸಬೇಕು. "ಯುಪಿ ಮಾದರಿ" ಎಂದು ಬಿಜೆಪಿ ಬಿಂಬಿಸುತ್ತಿದ್ದದ್ದು ಇದೇ ರೀತಿಯ ಹಣದ ದಂಧೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ ಎಂದರು.
ಜಿಲ್ಲೆಯಲ್ಲಿ ಗುರು ದತ್ತಾತ್ರೇಯರ ಹೆಸರಿನಲ್ಲಿ ರಾಜಕೀಯ ಮಾಡಿದವರ ಪರಿಸ್ಥಿತಿ ಏನಾಗಿದೆಯೋ, ಅದೇ ರೀತಿಯಲ್ಲಿ ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡಿದವರಿಗೂ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇವಾಲಯದ ಟ್ರಸ್ಟ್‌ನ ಹಣಕಾಸಿನ ಲೆಕ್ಕ ಕೇಳಿದಾಗ ಸದ್ಯಕ್ಕೆ ಲೆಕ್ಕ ನೀಡಲು ಸಾಧ್ಯವಿಲ್ಲ ಎಂದು ಟ್ರಸ್ಟ್ ಸದಸ್ಯರು ಹೇಳಿರುವ ಸುದ್ದಿ ಹಾಸ್ಯಾಸ್ಪದವಾಗಿದೆ. "ನೀವು ಹೇಗೆ ರಾಮ ಮಂದಿರದ ಲೆಕ್ಕ ಕೇಳಿದ್ದೀರೋ, ಅದೇ ರೀತಿಯಲ್ಲಿ ರಾಜ್ಯ ಸರ್ಕಾರವೂ ವಿವಿಧ ಸಂಸ್ಥೆಗಳ ಲೆಕ್ಕ ಕೇಳಿದರೆ ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಏಕೆ? ಎಂದು ಪ್ರಶ್ನಿಸಿದರು.
ಬಂಧಿತ ಟ್ರಸ್ಟ್ ಸದಸ್ಯರು ಬಿಜೆಪಿ ಹಾಗೂ ಸಂಘಪರಿವಾರದ ನಿಷ್ಠಾವಂತ ಕಾರ್ಯಕರ್ತರು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ. ಈ ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸುಪ್ರೀಂ ಕೋರ್ಟ್‌ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಿವಕುಮಾರ್, ಶರತ್, ಪ್ರಕಾಶ್, ರಾಜೇಶ್, ಲೋಕೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net