ಕಡೂರು: ಅಕ್ರಮ-ಸಕ್ರಮ ಯೋಜನೆಯಡಿ ಟಿಸಿ ಅಳವಡಿಸಿಕೊಡಲು ಅರ್ಜಿ ಸಲ್ಲಿಸಿ ಐದು ವರ್ಷವಾದರೂ ಟಿಸಿ ನೀಡಲು ಮೆಸ್ಕಾಂ ಅಧಿಕಾರಿಗಳು ಮುಂದಾಗಿಲ್ಲ ಎಂದು ಮಾವಿನಹಳ್ಳಿ ಗ್ರಾಮದ ರೈತ ಲೋಕೇಶಪ್ಪ ದೂರಿದರು.
ಬಿಸಲೆರೆ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಟಿಸಿ ಬಗ್ಗೆ ಪ್ರಶ್ನಿಸಿದರೆ ನಿಮ್ಮ ಅರ್ಜಿ ಸೋಲಾರ್ ಸಂಪರ್ಕಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ನಾವು ಭರಿಸಿದ ಹಣ ಕ್ರೆಡಿಲ್ ಖಾತೆಗೆ ಸಂದಾಯವಾಗಿದೆ ಎಂದು ಉತ್ತರಿಸುತ್ತಾರೆ. 500 ಮೀಟರ್ ಜಾಗದ ಒಳಗೆ ಇರುವ ನಮ್ಮ ಜಮೀನಿಗೆ 500 ಮೀಟರ್ ಜಾಗಕ್ಕಿಂತ ಹೊರಗಡೆ ಇದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನನಗೆ 65ವರ್ಷ ವಯಸ್ಸಾಗಿದೆ. 800 ರೂ. ವಿಧವಾ ವೇತನ ಬರುತ್ತಿದೆ. ಅದನ್ನು 1,200 ಮಾಡಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇವರಿಗೆ 59 ವರ್ಷ ಭರ್ತಿಗೊಂಡ ಬಳಿಕ ವಿಧವಾ ವೇತನದಿಂದ ವೃದ್ಧಾಪ್ಯ ವೇತನಕ್ಕೆ ಪರಿಗಣಿಸಬೇಕಿತ್ತು. ಗ್ರಾಮಲೆಕ್ಕಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
500 ಮೀಟರ್ ಒಳಗಿನ ಜಾಗದಲ್ಲಿ ಟಿಸಿ ಅಳವಡಿಸಲು ತೊಂದರೆಯಾಗುವುದಿಲ್ಲ. ವರದಿ ನೀಡುವಲ್ಲಿ ಮೆಸ್ಕಾಂ ಅಧಿಕಾರಿಗಳಿಂದ ಲೋಪವಾಗಿದೆ. ಮೆಸ್ಕಾಂ ತಪ್ಪಿಗೆ ಜನರು ಏಕೆ ತೊಂದರೆ ಅನುಭವಿಸಬೇಕು? ಕೂಡಲೇ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸುವಂತೆ ಶಾಸಕ ಕೆ.ಎಸ್.ಆನಂದ್ ಮೆಸ್ಕಾಂ ಎಇಇ ವೀಣಾಗೆ ಸೂಚಿಸಿದರು. ಹಕ್ಕುಪತ್ರ ಪಡೆಯಲು ಬಿಸಲೆರೆಯಲ್ಲಿ 90, ಜಕ್ಕನಹಳ್ಳಿಯಲ್ಲಿ 20, ಆಡಿಗೆರೆಯಲ್ಲಿ 40 ನಿವಾಸಿಗಳು ಚಲನ್ ಪಾವತಿಸಿಲ್ಲ. ಮಾ.16ರೊಳಗೆ ಚಲನ್ ಪಾವತಿಸಬೇಕು ಎಂದರು.
ಇಒ ಸಿ.ಆರ್.ಪ್ರವೀಣ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಆಸಂದಿ ಕಲ್ಲೇಶ್, ಜಿಲ್ಲಾ ಕೆಡಿಪಿ ಸದಸ್ಯ ಗುಮನಹಳ್ಳಿ ಅಶೋಕ್, ಗ್ಯಾರಂಟಿ ಸಮಿತಿ ಸದಸ್ಯೆ ಪುಷ್ಪಾ ರಮೇಶ್, ತೋಟಗಾರಿಕಾ ಸಹಾಯಕ ನಿರ್ದೇಶಕ ಜಯದೇವಪ್ಪ, ಪಿಡಿಒ ಸುನೀಲ್ ಇದ್ದರು.
ಬೆಳೆ ದೃಢೀಕರಣ ಪತ್ರಕ್ಕೆ ಎಷ್ಟು ರೇಟ್?
ತಾಲೂಕಿನಲ್ಲಿ ಬೆಳೆ ದೃಢೀಕರಣ ಪತ್ರ ಪಡೆಯಲು 500 ರೂ. ನೀಡಬೇಕಾದ ಸ್ಥಿತಿ ಇದೆ. ಗ್ರಾಮಲೆಕ್ಕಿಗರೇ ಹಣಕ್ಕೆ ಕೈಚಾಚುತ್ತಾರೆ. ಬೆಳೆ ದೃಢೀಕರಣ ಪತ್ರಕ್ಕೆ ಎಷ್ಟು ರೇಟ್ ಫಿಕ್ಸ್ ಮಾಡಲಾಗಿದೆ ಎಂದು ತಹಸೀಲ್ದಾರ್‌ಗೆ ಗ್ರಾಮದ ನಂದೀಶ್ ಪ್ರಶ್ನಿಸಿದರು. ಇದರಿಂದ ಆಕ್ರೋಶಗೊಂಡ ತಹಸೀಲ್ದಾರ್, ಯಾರು ಹಣ ಕೇಳಿದ್ದಾರೆ ಎಂಬುದನ್ನು ಲಿಖಿತವಾಗಿ ದೂರು ನೀಡಿ. ಈ ಹಿಂದೆ ಯಾರೋ ಮಾಡಿದ ತಪ್ಪಿಗೆ ಇಲಾಖೆಯನ್ನು ದೂರುವುದು ತಪ್ಪು. ಯಾರ‌್ಯಾರು ಪಡೆದಿದ್ದಾರೆ ಎಂಬುದನ್ನು ಸಾಕ್ಷಿಸಮೇತ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.