

ಕನ್ನಡದ ಮೇರು ಸಾಹಿತಿ ಡಿ.ವಿ.ಗುಂಡಪ್ಪನವರು ಬದುಕಿದ್ದಾಗಲೇ ಅವರ ಮಂಕುತಿಮ್ಮನ ಕಗ್ಗ ಕೃತಿ ಇಂಗ್ಲೀಷ್ ಅಥವಾ ಹಿಂದಿ ಭಾಷೆಗೆ ಅನುವಾದವಾಗಿದ್ದರೆ ಆ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯುತ್ತಿತ್ತು ಎಂದು ಮಂಕುತಿಮ್ಮನ ಕಗ್ಗ ಪ್ರವಚನ ಖ್ಯಾತಿಯ ವಾಗ್ಮಿ ಶಿವಮೊಗ್ಗದ ಜಿ.ಎಸ್. ನಟೇಶ್ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಬೊಂಗಾಳೆ ಪ್ರಕಾಶನ, ಕಲ್ಕಟ್ಟೆ ಪುಸ್ತಕದ ಮನೆ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಎನ್.ರಮೇಶ್ ಬೊಂಗಾಳೆ ಅವರ ಮಂಕುತಿಮ್ಮನ ಕಗ್ಗ ಕೃತಿಯ ಹಿಂದಿ ಅನುವಾದ ಮತ್ತು ವ್ಯಾಖ್ಯಾನ ಕೃತಿಯನ್ನು ಲೋಕಾರ್ಪಣೆ ಮಾತನಾಡಿದರು.
ಕನ್ನಡದ ಭಗವದ್ಗೀತೆ ಎಂದೇ ಖ್ಯಾತವಾಗಿರುವ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕನ್ನಡ ಭಾಷೆಯಲ್ಲಿ ಇದ್ದುದರಿಂದ ಅದಕ್ಕೆ ಜ್ಞಾನಪೀಠ ಪ್ರಶಸ್ತಿ ಬರಲಿಲ್ಲ ಎಂದು ವಿಷಾದಿಸಿದ ಅವರು, ಮಂಕುತಿಮ್ಮನ ಕಗ್ಗವನ್ನು ಹಿಂದಿ ಭಾಷೆಗೆ ಅನುವಾದ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಈ ಹಿಂದೆ ಸಾಹಿತಿ ಸರೋಜಿನಿ ಮಹಿಷಿ ಅವರು ಕಗ್ಗದ ಕೆಲವು ಸಾಲುಗಳನ್ನಷ್ಟೇ ಅನುವಾದ ಮಾಡಿದ್ದರು. ಇದುವರೆಗೂ ಅದನ್ನು ಸಂಪೂರ್ಣವಾಗಿ ಅನುವಾದ ಮಾಡಲು ಸಾಧ್ಯವಾಗಿಲ್ಲ, ಅದನ್ನು ಸಾಹಿತಿ ರಮೇಶ್ ಬೊಂಗಾಳೆ ಅವರು ಯಶಸ್ವಿಯಾಗಿ ಸಾಧಿಸಿದ್ದಾರೆ ಎಂದು ಶ್ಲಾಘಿಸಿದರು.
ಪುಸ್ತಕ ಬರೆಯುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಆದರೆ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಸಮಾಜದಲ್ಲಿ ಓದುವ ಹವ್ಯಾಸ ದೂರವಾಗುತ್ತಿದೆ ಎಂದು ವಿಷಾದಿಸಿದ ಅವರು ಯಾವ ಸಮಾಜದಲ್ಲಿ ಓದು ಬಿದ್ದು ಹೋಗುತ್ತದೆಯೋ ಆ ಸಮಾಜ ಆದಷ್ಟು ಬೇಗ ಅಧಃಪತನವಾಗುತ್ತದೆ ಎಂದು ಎಚ್ಚರಿಸಿದರು.
ಹಿಂದಿನ ಕಾಲದಲ್ಲಿ ನಮ್ಮನ್ನಾಳುತ್ತಿದ್ದ ರಾಜರುಗಳಿಗೆ ಶಸ್ತ್ರ ಜ್ಞಾನ ಮತ್ತು ಶಾಸ್ತ್ರ ಜ್ಞಾನವಿತ್ತು ಹಾಗಾಗಿ ಸಂಗೀತ ಸಾಹಿತ್ಯ ಕಲೆ ಅಂದು ಬೆಳೆಯುತ್ತಿದ್ದವು. ಆದರೆ ಇಂದಿನ ರಾಜರುಗಳಿಗೆ ಶಸ್ತ್ರ ಜ್ಞಾನ ಮತ್ತು ಶಾಸ್ತ್ರ ಜ್ಞಾನವಿಲ್ಲ ಹಾಗಾಗಿ ಸಂಗೀತ ಸಾಹಿತ್ಯ ಕಲೆ ಬೆಳೆಯುತ್ತಿಲ್ಲ ಎಂದರು.
ಸಾಹಿತಿ ರಮೇಶ್ ಬೊಂಗಾಳೆ ಅವರು ಮಂಕುತಿಮ್ಮನ ಕಗ್ಗವನ್ನು ಡಿವಿಜಿ ಅವರಂತೆಯೇ ಅತ್ಯಂತ ಸರಳವಾಗಿ ಅನುವಾದಿಸಿದ್ದಾರೆ, ಮಂಕುತಿಮ್ಮನ ಕಗ್ಗವನ್ನು ಓದುವುದರಿಂದ ಬದುಕುವ ರೀತಿ, ಬದುಕುವ ಕಲೆ ನಮಗೆ ಸಿದ್ದಿಸುತ್ತದೆ, ಇಂತಹ ಸಾಹಿತ್ಯದ ಕಾರ್ಯಕ್ರಮಗಳಿಗೆ ಕಲಾಮಂದಿರ ಜನರಿಂದ ತುಂಬಿ ತುಳುಕಬೇಕು ಆಗ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ರಮೇಶ್ ಬೊಂಗಾಳೆ ಅವರ ಬದುಕುವ ಕಲೆ ಮತ್ತು ಅರಿವಿನ ಹಾದಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನಿ ಡಾ,ವಿಜಯಕುಮಾರ್ ಅವರೇಕಾಡು, ವಿಶ್ವ ಪುಸ್ತಕ ಪ್ರೇಮಿಗಳ ದಿನದಂದೇ ಇಂತಹ ವಿಶೇಷ ಕೃತಿಗಳು ಲೋಕಾರ್ಪಣೆಗೊಂಡಿರುವುದು ತಮಗೆ ಅತ್ಯಂತ ಸಂತಸ ತಂದಿದೆ ಎಂದರು.
ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾದ ಮಂಕುತಿಮ್ಮನ ಕಗ್ಗವನ್ನು ಹಿಂದಿ ಭಾಷೆಗೆ ಅನುವಾದ ಮಾಡಿರುವ ರಮೇಶ್ ಬೊಂಗಾಳೆ ಅವರ ಸಾಧನೆ ಅಪಾರ ಮತ್ತು ಅದ್ಭುತವಾಗಿದೆ ಎಂದರು.
ಸಾಹಿತಿ ಡಾ.ಬೆಳವಾಡಿ ಮಂಜುನಾಥ್ ಮಾತನಾಡಿ, ಮಂಕುತಿಮ್ಮನ ಕಗ್ಗವನ್ನು ಸಂಪೂರ್ಣವಾಗಿ ಅನುವಾದಿಸಿರುವ ರಮೇಶ್ ಬೊಂಗಾಳೆ ಅವರು ಅನುವಾದಕರಾಗಿ ದೀರ್ಘಕಾಲ ಉಳಿಯಬಲ್ಲ ಸಾಹಿತಿಯಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಬಿ.ಎನ್.ರಮೇಶ್ ಬೊಂಗಾಳೆ, ಮಂಕುತಿಮ್ಮನ ಕಗ್ಗ ಕೃತಿಯನ್ನು ಹಿಂದಿ ಭಾಷೆಗೆ ಅನುವಾದಿಸಲು ತಮಗೆ ಮೂರು ವರ್ಷಗಳು ಬೇಕಾದವು. ಅದನ್ನು ಅನುವಾದಿಸಿ ಸಾಮಾಜಿಕ ಜಾಲತಾಣಕ್ಕೆ ಮತ್ತು ವಾಟ್ಸಾಪ್ ನಲ್ಲಿ ಹಾಕುವ ಇಚ್ಛೆ ತಮಗಿತ್ತು ಆದರೆ ಎಂ.ಆರ್. ಗುರುಮೂರ್ತಿ ದಂಪತಿ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿ ಅನುವಾದವನ್ನು ಪುಸ್ತಕವಾಗಿ ಪ್ರಕಟಿಸಿದ್ದಾರೆ ಎಂದು ತಿಳಿಸಿದರು.
ಕೃತಿಯ ಅನುವಾದಕ್ಕೆ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದ ಅವರು ಮಂಕುತಿಮ್ಮನ ಕಗ್ಗವನ್ನು ಓದುವುದರಿಂದ ಮನಸ್ಸಿಗೆ ಸಂಸ್ಕಾರ ದೊರೆಯುತ್ತದೆ ಎಂದು ಹೇಳಿದರು.
ಕಾಫಿ ಬೆಳೆಗಾರ ಎಂ.ಆರ್. ಗುರುಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಜಾತ ಗುರುಮೂರ್ತಿ ಕಗ್ಗದ ಹಿಂದಿ ದ್ವನಮುದ್ರಿಕೆಯನ್ನು ಬಿಡುಗಡೆಗೊಳಿಸಿದರು, ಸಮಾರಂಭದ ನಡುವೆ ಶ್ರೀಕಂಠೇಶ್ವರ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ಬದುಕುವ ಕಲೆ ಮತ್ತು ಅರಿವಿನ ಹಾದಿ ಕೃತಿಯ ಕುರಿತು ಸುಮಾಪ್ರಸಾದ್, ಕಲ್ಕಟ್ಟೆ ಪುಸ್ತಕದ ಮನೆಯ ಸಂಸ್ಥಾಪಕಿ ರೇಖಾ ನಾಗರಾಜ ರಾವ್ ಮಾತನಾಡಿದರು.
ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ನಾಗರಾಜರಾವ್ ಕಲ್ಕಟ್ಟೆ, ರಾಯಾನಾಯಕ್,ಎಸ್. ಪಿ. ಅಶೋಕ್ ಉಪಸ್ಥಿತರಿದ್ದರು.