ಅಜ್ಜಂಪುರದಲ್ಲಿ ಆಯೋಜಿಸಿದ್ದ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು. ಮಂಜುನಾಥ್, ಎ.ಜಿ.ರೇವಣ್ಣ, ಡಿ.ಕವಿತಾ, ಜಿ.ನಟರಾಜ್, ಎಂ.ಕೃಷ್ಣಮೂರ್ತಿ, ವಿನಾಯಕ ಸಾಗರ್, ಎಚ್.ಆರ್.ಚಂದ್ರಪ್ಪ ಇತರರಿದ್ದರು.
Published on:
Copied
Follow Us
ತರೀಕೆರೆ: ಕಲೆ, ಶಿಲ್ಪಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿ ಮಾನವ ಲೋಕದ ಅದ್ಭುತ ಪ್ರಕಾರಗಳು ಎಂದು ಸಾಹಿತಿ ಮಂಜುನಾಥ್ ಹೇಳಿದರು.
ಅಜ್ಜಂಪುರ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನ ಆವರಣದಲ್ಲಿ ನಿರ್ಮಿಸಿದ್ದ ಸಾಹಿತಿ ಗೌ.ರು.ಓಂಕಾರಯ್ಯ ವೇದಿಕೆಯಲ್ಲಿ ಭಾನುವಾರ ಆಯೋಜಿಸಿದ್ದ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾಮಿ ಶಂಕರಾನಂದರು 9 ದಶಕಗಳ ಹಿಂದೆಯೇ ಅಜ್ಜಂಪುರದಲ್ಲಿ ಭಗವದ್ಗೀತೆಯ-ಅಧ್ಯಾತ್ಮದ ಸಂದೇಶ ನೀಡಿದ್ದರು. ಹಾಗಾಗಿ ಭಗವದ್ಗೀತೆ ನಮ್ಮೂರಿನ ಹೆಗ್ಗುರುತಾಯಿತು. ಎಂಟು ದಶಕಗಳ ಹಿಂದೆ ಅಜ್ಜಂಪುರದಲ್ಲಿ ಸ್ವಾಮಿ ಶಂಕರಾನಂದರು ಜನಪ್ರಿಯಗೊಳಿಸಿದ ಭಗವದ್ಗೀತೆಯ ಕನ್ನಡ ಪಾರಾಯಣ ಪ್ರತಿಗಳು ಕುರುಕ್ಷೇತ್ರದಲ್ಲಿ ಕಂಡು ಬಂದಿರುವುದು ವಿಶೇಷತೆ ಜತೆ ಹೆಮ್ಮೆ ಪಡುವಂಥ ಸಂಗತಿಯಾಗಿದೆ ಎಂದರು.
50ರ ದಶಕದಲ್ಲಿ ಟಿ.ಕೃಷ್ಣೋಜಿರಾವ್ ಚವ್ಹಾಣ್ ಮತ್ತು ಎಸ್.ಸತ್ಯನಾರಾಯಣ ಶೆಟ್ಟರ ನೇತೃತ್ವದಲ್ಲಿ ಅಸ್ತಿತ್ವ ಬಂದಿದ್ದ ಕಲಾ ಸೇವಾ ಸಂಘ ಹೆಸರಿನ ಹವ್ಯಾಸಿ ರಂಗ ಸಂಸ್ಥೆ ರಂಗ ಚಟುವಟಿಕೆಗಳಿಗಾಗಿಯೇ 60 ದಶಕದಲ್ಲಿ ಸ್ವಂತ ಕಟ್ಟಡ ನಿರ್ಮಿಸಿ ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ದಿಗ್ಗಜ ಕಲಾವಿದರಾದ ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ, ಚಿಂದೋಡಿ ಲೀಲಾ, ಮಾ.ಹಿರಣಯ್ಯರಂಥವರ ಬಹುತೇಕ ನಾಟಕ ಪ್ರದರ್ಶನ ಕಂಡಿದ್ದ ರಂಗ ಮಂದಿರದ ಸ್ಥಿತಿ ಶೋಚನೀಯವಾಗಿದೆ. ಈ ನಿಟ್ಟಿನಲ್ಲಿ ಪಪಂ ಗಮನಹರಿಸಿ ಕಲಾ ಸೇವಾ ಸಂಘದ ಕಟ್ಟಡದ ಕಾಯಕಲ್ಪಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ ಮಾತನಾಡಿ, ತಂತ್ರಜ್ಞಾನದ ದಾಳಿ ಅತಿಯಾದ ಆಂಗ್ಲ ಭಾಷೆಯ ಮೇಲಿನ ವ್ಯಾಮೋಹದಿಂದ ಕನ್ನಡದ ಬೆಳವಣಿಗೆ ಕುಂಠಿತವಾಗಿದೆ. ಕನ್ನಡದ ಸಮಗ್ರತೆಗಾಗಿ ಮಕ್ಕಳಿಗೆ ಕನ್ನಡ ಬಳಕೆಯ ಅನಿವಾರ್ಯತೆ ತೋರಿಸಿಕೊಡಬೇಕು ಎಂದರು.
ಪಪಂ ಅಧ್ಯಕ್ಷ ಎ.ಜಿ.ರೇವಣ್ಣ, ಉಪಾಧ್ಯಕ್ಷೆ ಡಿ.ಕವಿತಾ, ಕೆಪಿಸಿಸಿ ಸದಸ್ಯ ಜಿ.ನಟರಾಜ್, ಜಿಪಂ ಮಾಜಿ ಸದಸ್ಯ ಎಂ.ಕೃಷ್ಣಮೂರ್ತಿ, ತಹಸೀಲ್ದಾರ್ ವಿನಾಯಕ ಸಾಗರ್, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎ.ಟಿ.ಶ್ರೀನಿವಾಸ್ ಮತ್ತಿತರರಿದ್ದರು.