- ಮಾಜಿ ಸಚಿವ ದಿನೇಶ್ ಗುಂಡೂರಾವ್ ಆಗ್ರಹ
- ಚಿಕ್ಕಮಗಳೂರಿನಲ್ಲಿ ಛಾತ್ರೊಂಕಿ ಗೂಂಜ್ ಕಾರ್ಯಕ್ರಮ
ಚಿಕ್ಕಮಗಳೂರು: ವಿದ್ಯಾರ್ಥಿಗಳು ಹಾಗೂ ಯುವ ಜನತೆಯ ಬಗ್ಗೆ ಸಹಾನುಭೂತಿ ಇಲ್ಲದ ದೇಶದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಜೊತೆಗೆ ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ಚರ್ಚೆಗೆ ಸ್ಪೀಕರ್ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್ ಹಾಗೂ ಎನ್ ಎಸ್ ಯುಐ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಛಾತ್ರೊಂಕಿ ಗೂಂಜ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ನೀಟ್ ಪರೀಕ್ಷೆ ಅಕ್ರಮದಿಂದಾಗಿ 21 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕಿತ್ತು. ಆದರೆ ರಾಜೀನಾಮೆ ನೀಡುವುದಿರಲಿ ಪ್ರಕರಣದ ಬಗ್ಗೆ ಮಾತನಾಡುತ್ತಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಮೋಸ ಮಾಡುತ್ತಿದೆ. ನೀಟ್ ಅಕ್ರಮ ಖಂಡಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ಕಳೆದ 20 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರು ಅವರ ಅಹವಾಲನ್ನು ಕೇಳಲು ಯಾವೊಬ್ಬ ಬಿಜೆಪಿ ನಾಯಕರು ತೆರಳಿಲ್ಲ. ಬದಲಿಗೆ ಸಂವಿಧಾನಾತ್ಮಕವಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಲಾಗಿದೆ ಎಂದು ದೂರಿದರು.
ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದಾಗಿ ಎಷ್ಟೇ ಚೆನ್ನಾಗಿ ಓದಿದರು ಉತ್ತಮ ಉದ್ಯೋಗ ಸಿಗುತ್ತದೆಯೇ ಎಂಬ ಅನುಮಾನ ಯುವ ಜನತೆಯಲ್ಲಿ ಮೂಡಲಾರಂಭಿಸಿದೆ. ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಪತ್ತೆ ಹಚ್ಚಿದ್ದು 19 ವರ್ಷದ ಯುವಕ. ಇನ್ನು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕಳೆದ 20 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಅವರನ್ನು ಮಾತನಾಡಿಸುವ ಕೆಲಸ ಮಾಡಿಲ್ಲ. ಮಣಿಪುರದಲ್ಲಿ ತಿಂಗಳುಗಟ್ಟಲೆ ಹಿಂಸಾಚಾರ ನಡೆದರೂ ಅದರ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚಲಿಲ್ಲ. ದೆಹಲಿಯಲ್ಲಿ ರೈತರು ಹೋರಾಟ ಮಾಡಿದರೆ ಅವರನ್ನು ದೇಶದ್ರೋಹಿಗಳು ಎಂದು ಕರೆದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಮಸೀದಿ, ದೇವಸ್ಥಾನ, ಚರ್ಚ್, ಹಿಂದೂ, ಮುಸ್ಲಿಂ ಎಂದು ಜನರ ಮನಸ್ಸು ಒಡೆದು ಆಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈ ಬಗ್ಗೆ ಯುವ ಜನತೆ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಯುವ ಜನತೆಗೆ ಭವಿಷ್ಯವೇ ಇಲ್ಲದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ನೀ ಪರೀಕ್ಷೆ ಅಕ್ರಮವನ್ನು ಖಂಡಿಸಿ, ದೇಶದ 150 ಸ್ಥಳಗಳಲ್ಲಿ ಇಂದು ಛಾತ್ರೊಂಕಿ ಗೂಂಜ್ ಕಾರ್ಯಕ್ರಮ ಆಯೋಜಿಸಲಾಗಿದೆ. ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆಯಾದಾಗ ಪ್ರಧಾನಿ ನರೇಂದ್ರ ಮೋದಿ ಅವರೇ ಜವಾಬ್ದಾರಿ ತೆಗೆದುಕೊಂಡು ಕೂಡಲೇ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಪಡೆಯಬೇಕಿತ್ತು. ಆದರೆ ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ಮಾಡುತ್ತಿದ್ದವರ ಮೇಲೆಯೇ ಹಲ್ಲೆ ನಡೆಸಿರುವುದು ಅಕ್ಷಮ್ಯ. ಕೇಂದ್ರ ಸರ್ಕಾರ ಹಿಟ್ಲರ್ ರೀತಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡೆ ಪುಷ್ಪಲತಾ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಐದಾರು ಕ್ಷೇತ್ರಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಇದೇ ಕಾರಣದಿಂದ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋರಾಟ ಆರಂಭಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿಯೂ ವಿಪುಲ ಉದ್ಯೋಗಾವಕಾಶಗಳಿವೆ. ಇದನ್ನು ಯುವಜನತೆಗೆ ತಿಳಿಸುವ ಕೆಲಸ ಮಾಡಬೇಕಿದೆ. ಇದಕ್ಕೆ ರಾಹುಲ್ ಗಾಂಧಿ ಅವರಂತ ನೇತಾರರು ಅಧಿಕಾರಕ್ಕೆ ಬರಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ನೀಟ್ ಪರೀಕ್ಷೆ ಅಕ್ರಮದಿಂದಾಗಿ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಾಶವಾದಂತಾಗಿದೆ. ಇದನ್ನೇ ನಾವು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಕೇಳುತ್ತಿದ್ದೇವೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮಾಜಿ ಅಧ್ಯಕ್ಷ ನಯಾಜ್ ಅಹಮದ್, ಯುವ ಕಾಂಗ್ರೆಸ್ ಮುಖಂಡ ಲಾಕೇಶ್ ಮತ್ತಿತರರಿದ್ದರು.
ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
2024ರಲ್ಲಿಯೂ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. 2026ರಲ್ಲಿಯೂ ಅದು ಮರುಕಳಿಸಿದೆ. ಇದಲ್ಲದೆ 150ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಮೋಸ ನಡೆದಿದೆ. ಇದರ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ಹೊರಬೇಕಿತ್ತು ಜೊತೆಗೆ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಗೆ ಅವಕಾಶವನ್ನು ಮಾಡಿಕೊಡಬೇಕಿತ್ತು. ಆದರೆ ಚರ್ಚೆಗೆ ಅವಕಾಶವನ್ನೇ ನೀಡುತ್ತಿಲ್ಲ. ರಾಜ್ಯದಲ್ಲಿ ಏನೇ ಸಮಸ್ಯೆ ಆದರೂ ಅದು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿರುತ್ತದೆ. ಅದೇ ದೇಶದಲ್ಲಿ ಏನೇ ಸಮಸ್ಯೆಯಾದರೂ ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಆದರೆ ಇಂದು ಅನ್ಯಾಯಕ್ಕೆ ಒಳಗಾದವರು ಹೋರಾಟ ಮಾಡುತ್ತಿದ್ದರೆ ಅವರನ್ನು ದೇಶದ್ರೋಹಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಕೆಪಿಎಸ್ ಸಿಯಲ್ಲಿ ನಡೆಯುತ್ತಿರುವ ಅನ್ಯಾಯ ಹರ ಸಾಹಸ ಮಾಡುತ್ತಿದ್ದೇವೆ ಸಮಸ್ಯೆ ಅರ್ಥಮಾಡಿಕೊಂಡು ಪಾರದರ್ಶಕ ವ್ಯವಸ್ಥೆ ತರಬೇಕು ಎಂಬ ನಿಟ್ಟಿನಲ್ಲಿಯೇ ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ. ಕೇವಲ ರಾಜಕೀಯ ಪಕ್ಷದವರೇ ಹೋರಾಟ ಮಾಡಬೇಕು ಎಂದಿಲ್ಲ. ಯಾವಾಗ ಜನರು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳುತ್ತಾರೆಯೋ ಹಾಗೂ ಅನ್ಯಾಯವಾದಾಗ ಧ್ವನಿ ಎತ್ತುತ್ತಾರೆಯೋ ಆಗ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ.
ದಿನೇಶ್ ಗುಂಡೂರಾವ್, ಮಾಜಿ ಸಚಿವ