ಧಾರ್ಮಿಕ ಕೇಂದ್ರಗಳು ರಾಷ್ಟ್ರಭಕ್ತರನ್ನು ಬೆಳೆಸಲಿ

ಹೊರನಾಡಿನಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಟ್ಟೆಲೋಟ ವಿತರಿಸಿದರು.
ಹೊರನಾಡಿನಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಟ್ಟೆಲೋಟ ವಿತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಕೋಟ ಶ್ರೀನಿವಾಸ ಪೂಜಾರಿ
  • ಸೂಕ್ಷ್ಮ ವಲಯದಿಂದ ಕೈಬಿಡಿ
ಕಳಸ: ಬದಲಾದ ಭಾರತದಲ್ಲಿ ಚಿಕ್ಕಮಕ್ಕಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಾವು ವಿಲರಾಗಿದ್ದೇವೆ. ನಮ್ಮ ಧಾರ್ಮಿಕ ಕೇಂದ್ರಗಳು ಶ್ರದ್ಧೆಯಿಂದ ಇಡೀ ಸಮಾಜವನ್ನು ಒಂದು ತಂಡವಾಗಿ ನೋಡಿ, ಜಾತಿ, ಧರ್ಮ ಭೇದವಿಲ್ಲದೆ ರಾಷ್ಟ್ರ ಭಕ್ತರನ್ನು ಬೆಳೆಸುವ ಕೇಂದ್ರಗಳಾಗಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಕ್ಷೇತ್ರ ಹೊರನಾಡು ಗ್ರಾಮೀಣಾಭಿವೃದ್ಧಿ ಯೋಜನೆಯಡಿ 1991-92ರಿಂದ 2026ರವರೆಗೆ 24 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಭಕ್ತರಿಂದ ಬಂದ ಹಣವನ್ನು ಭಕ್ತರಿಗೇ ವಿನಿಯೋಗಿಸುವ ಮೂಲಕ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಪ್ರಶಂಸಿಸಿದರು.
ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಶಿ ಮಾತನಾಡಿ, ಅಜ್ಜ, ಅಪ್ಪ ಹಾಕಿಕೊಟ್ಟ ಮಾರ್ಗದಲ್ಲಿ ಸಾರ್ವಜನಿಕ ಸೇವೆ ತೊಡಗಿಸಿಕೊಂಡಿದ್ದು, ಮುಂದೆಯೂ ನಮ್ಮ ಕುಟುಂಬ ಜನಸೇವೆಗೆ ಸಿದ್ಧವಿದೆ. ಮಗುವಿಗೆ ಉತ್ತಮ ಸಂಸ್ಕಾರ ಸಿಗಬೇಕಾದರೆ ಮೊದಲು ಹೊಟ್ಟೆ ತಣ್ಣಗಿರಬೇಕು. ಯಾವುದೇ ಮನೆಯಲ್ಲೂ ಮಕ್ಕಳು ಹಾಗೂ ಹಿರಿಯರು ಹಸಿವಿನಿಂದ ಬಳಲಬಾರದು. ಕ್ಷೇತ್ರದ ಪರಂಪರೆಯಂತೆ ಇಲ್ಲಿಗೆ ಬರುವ ಎಲ್ಲರಿಗೂ ಮೊದಲು ಆತಿಥ್ಯ ಹಾಗೂ ಭೋಜನದ ವ್ಯವಸ್ಥೆ, ನಂತರವೇ ದೇವರ ದರ್ಶನ ಮತ್ತು ಪೂಜೆ ಎಂದು ತಿಳಿಸಿದರು.
ಅನ್ನದಾಸೋಹ ಯೋಜನೆಯಡಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗೂ ಆಯ್ದ ದೇವಾಲಯಗಳಿಗೆ 2,500 ತಟ್ಟೆ-ಲೋಟಗಳನ್ನು ವಿತರಿಸಲಾಯಿತು. ಶೈಕ್ಷಣಿಕ ಯೋಜನೆಯಡಿ ಕಳಸ ತಾಲೂಕಿನ ಶಾಲಾ ಮಕ್ಕಳಿಗೆ 15,000 ನೋಟ್‌ಬುಕ್‌ಗಳು, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಶಾಲಾ ಶುಲ್ಕ ವಿತರಿಸಲಾಯಿತು.
ಕಳಸ ತಾಲೂಕಿನ ಹಲವು ಗ್ರಾಮಗಳನ್ನು ಸೂಕ್ಷ್ಮ ವಲಯ ಪ್ರದೇಶಕ್ಕೆ ಸೇರಿಸಲಾಗಿದ್ದು, ಈ ವರದಿಯನ್ನು ತಕ್ಷಣವೇ ಕೈಬಿಡಬೇಕು ಎಂದು ಸಂಸದರ ಗಮನಕ್ಕೆ ತಂದು. ಎಲ್ಲಾ ಪಕ್ಷಗಳು ಒಟ್ಟಾಗಿ ಒತ್ತಡ ಹೇರಿ ಈ ಪಟ್ಟಿಯಿಂದ ಕಳಸದ ಗ್ರಾಮಗಳನ್ನು ತಕ್ಷಣವೇ ಕೈಬಿಡಿಸಬೇಕು. ಕರಾವಳಿಯನ್ನು ಅತ್ಯಂತ ಸಮೀಪದಿಂದ ಸಂಪರ್ಕಿಸುವ ಸಂಸೆ-ಎಳನೀರು-ದಿಡುಪೆ ರಸ್ತೆ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಸರ್ವಋತು ರಸ್ತೆಗಳನ್ನು ಶೀಘ್ರವೇ ಅಭಿವೃದ್ಧಿಗೊಳಿಸಬೇಕು, ಎಂದು ಧರ್ಮಕರ್ತ ಜಿ. ಭೀಮೇಶ್ವರ ಜೋಶಿ ಸಂಸದರಲ್ಲಿ ಒತ್ತಾಯಿಸಿದರು.
 ಕಸ್ತೂರಿ ರಂಗನ್ ವರದಿ ಜಾರಿಯಾದಲ್ಲಿ ಕಳಸ ತಾಲೂಕಿನ ರೈತರಿಗೆ ಮರಣಶಾಸನ ಬರೆದಂತೆ. ಸರ್ಕಾರವು 7ನೇ ಬಾರಿಗೆ ಹೊಸ ಕರಡು ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಕೆಗೆ 60 ದಿನ ಕಾಲಾವಕಾಶ ನೀಡಿದೆ. ಎಲ್ಲ್ಲ ಪಕ್ಷಗಳ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳ ಮೂಲಕ ನಡಾವಳಿ ಮಾಡಿ ವಿರೋಧ ವ್ಯಕ್ತಪಡಿಸಲಾಗುವುದು. ಪಕ್ಷಭೇದ ಮರೆತು ಈ ವರದಿಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕಳಸ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ಎಚ್ಚರಿಸಿದರು.
ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ್, ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ಕೆಳಭಾಗ, ಜೆಡಿಎಸ್ ಅಧ್ಯಕ್ಷ ಸಂತೋಷ್ ಹಿನಾರಿ, ಮುಖಂಡರಾದ ಎಂ.ಎ.ಶೇಷಗಿರಿ, ಕೆ.ಸಿಂಧರಣೇಂದ್ರ, ಜ್ವಾಲನಯ್ಯ, ದೇವಸ್ಥಾನದ ಟ್ರಸ್ಟಿಗಳಾದ ರಾಜಲಕ್ಷ್ಮೀ ಬಿ. ಜೋಶಿ, ರಾಜಗೋಪಾಲ್ ಜೋಶಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net