ಕೆ.ಬಿದರೆ ಗ್ರಾಪಂಗೆ ಕಾಯಂ ವೈದ್ಯರು, ವಿಎ ಕೂಡಲೇ ನೇಮಿಸಿ

 ಕಡೂರಿನ ಕೆ.ಬಿದರೆ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು
ಕಡೂರಿನ ಕೆ.ಬಿದರೆ ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು
Published on
ಕಡೂರು: ನಮ್ಮ ಗ್ರಾಮದಲ್ಲಿರುವ ಆಯುಷ್ ಕ್ಲಿನಿಕ್‌ನಲ್ಲಿ ಕಾಯಂ ವೈದ್ಯರಿಲ್ಲ. ಇಲ್ಲಿಗೆ ಬರುವ ವೈದ್ಯರು ಸರಿಯಾಗಿ ಬರುವುದಿಲ್ಲ. ಅಲ್ಲದೇ ಹಲವು ವರ್ಷಗಳಿಂದ ಗ್ರಾಮಕ್ಕೆ ಕಾಯಂ ಗ್ರಾಮ ಲೆಕ್ಕಿಗರು ನೇಮಕವಾಗದಿರುವುದು ಸ್ಥಳೀಯ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ. ಕೂಡಲೇ ಕಾಯಂ ವೈದ್ಯರು ಹಾಗೂ ಗ್ರಾಮಕ್ಕೆ ವಿಎ ನೇಮಕ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಕೆ.ಬಿದರೆ ಗ್ರಾಮದಲ್ಲಿ ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಸಮಸ್ಯೆಯ ಸುರಿಮಳೆಗೈದರು. ಗ್ರಾಮಕ್ಕೆ ಆಯುಷ್ ಇಲಾಖೆಯಿಂದ ನೇಮಕವಾಗಿರುವ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆರೋಗ್ಯ ಇಲಾಖೆ ದಾದಿಯರು ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ರಾತ್ರಿ ವೇಳೆ ಏನಾದರೂ ಆರೋಗ್ಯದ ಸಮಸ್ಯೆ ಉಂಟಾದರೆ ಏನು ಮಾಡಬೇಕು. ಯಾರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು? ಈ ಬಗ್ಗೆ ಗ್ರಾಮ ಸಭೆಯಲ್ಲಿ ಗ್ರಾಮದ ವೈದ್ಯರ ಸಮಸ್ಯೆ, ಆರೋಗ್ಯ ಇಲಾಖೆ ದಾದಿಯರು ಸಮರ್ಪಕವಾಗಿ ಕಾರ್ಯನಿರ್ವಹಿಸಲು ನಿರ್ದೇಶನ ನೀಡುವ ಬಗ್ಗೆ ಪ್ರಸ್ತಾಪಿಸಿದರೆ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ ಎಂದು ದೂರಿದರು.
ಗ್ರಾಮಸ್ಥ ಕುಮಾರ್ ಮಾತನಾಡಿ, ಗ್ರಾಮದಲ್ಲಿ ಸರ್ವೇ ನಂಬರ್ 15ರ 2.12 ಎಕರೆ ಗುಂಡು ತೋಪು ಪ್ರದೇಶದಲ್ಲಿ ನಿರ್ಮಿಸಿಕೊಂಡಿರುವ 65 ಮನೆಗಳ ನಿವಾಸಿಗರಿಗೆ ಇ-ಸ್ವತ್ತು ಹಕ್ಕುಪತ್ರ ದೊರಕಿಸಿಕೊಂಡುವಂತೆ ಮನವಿ ಮಾಡಿದರು. ಗ್ರೇಡ್ 2 ತಹಸೀಲ್ದಾರ್ ಅಶೋಕ್ ಮಾತನಾಡಿ, ಗುಂಡು ತೋಪು ಪ್ರದೇಶವನ್ನು ಬದಲಾವಣೆಗೊಳಿಸಲು ಸಕ್ರಾದ ಹಂತದಲ್ಲಿ ನಡೆದಾಗ ಬಳಿಕ ಇ-ಸ್ವತ್ತುಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಉತ್ತರಿಸಿದರು.
ಕೆ.ಬಿದರೆ ಗ್ರಾಮದಿಂದ ಕಡೂರಿಗೆ ಸಾರಿಗೆ ಬಸ್‌ನಲ್ಲಿ ಬರಲು ಹಿರಿಯ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಬೆಳಗ್ಗಿನ ಅವಧಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಕೆಲವು ಬಸ್‌ಗಳು ಗ್ರಾಮದಲ್ಲಿ ನಿಲುಗಡೆಗೆ ಅವಕಾಶ ನೀಡದೆ ಸಂಚರಿಸುತ್ತದೆ. ಜತೆಗೆ ಬಿ.ಮಲ್ಲೇನಹಳ್ಳಿ ಗೇಟ್‌ನ ವಸತಿ ಶಾಲೆ ಸಮೀಪ ಬಸ್ ನಿಲುಗಡೆ ವ್ಯವಸ್ಥೆ ಮತ್ತು ಹೆಚ್ಚುವರಿ ಬಸ್‌ಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಕಂಚುಗಲ್, ಬಿ.ಬಸವನಹಳ್ಳಿ ಗೊಲ್ಲರಹಟ್ಟಿ ಹಾಗೂ ತಾಂಡ್ಯಾದ ಭಾಗದಲ್ಲಿ ನಡೆದ ಜೆಜೆಎಂ ಕಾಮಗಾರಿಯಲ್ಲಿ ಮಾಡಿದ ಕೆಲಸಗಳಿಗೆ ಗುತ್ತಿಗೆದಾರ ಇದುವರೆಗೂ ಕೂಲಿ ಹಣ ನೀಡಿಲ್ಲ ಎಂದು ಲೇಬರ್ ಗುತ್ತಿಗೆದಾರ ಸತೀಶ್ ದೂರಿದರು. 15 ದಿನದೊಳಗೆ ಕಾಮಗಾರಿ ಕೆಲಸದ ಹಣ ಕೊಡಿಸಿಕೊಡುವುದಾಗಿ ಇಂಜಿನಿಯರ್ ಹರಿರಾಮ್ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net