ಕನ್ನಡ ಸಾಹಿತ್ಯ ಸಮ್ಮೇಳನಗಳು ಸಡಗರ, ಸಂಭ್ರಮಕ್ಕೆ ಸೀಮಿತವಾಗದಿರಲಿ

ಮೂಡಿಗೆರೆಯಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಾಚಾರ್ಯ ಡಾ.ಎಚ್.ಎಂ.ಮಹೇಶ್ ಮಾತನಾಡಿದರು.
ಮೂಡಿಗೆರೆಯಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರಾಚಾರ್ಯ ಡಾ.ಎಚ್.ಎಂ.ಮಹೇಶ್ ಮಾತನಾಡಿದರು.
Published on: 

ಮೂಡಿಗೆರೆ: ಕನ್ನಡ ಸಾಹಿತ್ಯ ಪರಿಷತ್‌ಗೆ ರಾಜ್ಯಾಧ್ಯಕ್ಷರಿಲ್ಲದಿದ್ದರೂ ಸಾಹಿತ್ಯ ಸಮ್ಮೇಳನಗಳು ನಿಂತಿಲ್ಲ. ಪರಿಷತ್ ಹಾಗೂ ಕನ್ನಡದ ರಥವನ್ನು ಕನ್ನಡಿಗರು ಎಳೆದು ಸಾಗಿಸುತ್ತಿರುವುದು ಭಾಷಾಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಐಡಿಎಸ್‌ಜಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಂ.ಮಹೇಶ್ ಹೇಳಿದರು.

ಕಸಾಪ ತಾಲೂಕು ಘಟಕದಿಂದ ಶುಕ್ರವಾರ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಕೇವಲ ಸಡಗರ, ಸಂಭ್ರಮ ಹಾಗೂ ಆಚರಣೆಗಳಿಗೆ ಸೀಮಿತವಾಗಬಾರದು. ಸಮ್ಮೇಳನ, ಕನ್ನಡಜಾತ್ರೆ ಮತ್ತು ಹಬ್ಬಗಳು ನಾಡುನುಡಿಯ ಉಳಿವು ಹಾಗೂ ಬೆಳವಣಿಗೆಗೆ ಪೂರಕವಾಗಿದೆ. ಮಲೆನಾಡಿನ ಜನರ ಬದುಕು ಸುಗಮವಾಗಿಲ್ಲ. ಸ್ಥಳೀಯ ಸಮ್ಮೇಳನಗಳು ಸಮಸ್ಯೆಗಳ ಸಾಹಿತ್ಯ ವೇದಿಕೆಯಾಗುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದರು.

ಮಲೆನಾಡಿನ ವಿಶಿಷ್ಟ ಸಂಸ್ಕೃತಿ, ಕಲೆ, ಸಾಹಿತ್ಯ, ಆಹಾರ ಪದ್ಧತಿ ಹಾಗೂ ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ನೇರವಾಗಿ ಪರಿಚಯಿಸುವ ಬದಲು ಪುಸ್ತಕಗಳಲ್ಲಿ ತೋರಿಸಬೇಕಾದ ಸ್ಥಿತಿಗೆ ತಲುಪಿರುವುದು ಆತಂಕಕಾರಿ ಸಂಗತಿ. ನಮ್ಮ ನೆಲದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಭಾರತದ 20 ಪ್ರಮುಖ ಭಾಷೆಯ ಸಾಲಿನಲ್ಲಿ ಕನ್ನಡ ತನ್ನದೆಯಾದ ಉನ್ನತ ಸ್ಥಾನಮಾನಗಳನ್ನು ಪಡೆದು ಕೊಂಡಿದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆ ಜಾಗತಿಕ ಸಾಹಿತ್ಯ ಪರಂಪರೆಯಲ್ಲಿ ಗುರುತಿಸಿಕೊಳ್ಳುವಂತಿದೆ. ಕನ್ನಡ ಭಾಷೆ ಮತ್ತು ಲಿಪಿಯ ಹಿರಿಮೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಪ್ರತಿಯೊಬ್ಬ ಕನ್ನಡಿಗರೂ ಕೈಜೋಡಿಸಬೇಕು ಎಂದರು.

ಸಮ್ಮೇಳನದಲ್ಲಿ ಕನ್ನಡ ಸಿರಿ ಹಾಗೂ ರೈತ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಸಮ್ಮೇಳನಾಧ್ಯಕ್ಷ ಮೇಕನಗದ್ದೆ ಲಕ್ಷ್ಮಣ್‌ಗೌಡ, ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್‌ಗೌಡ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಲಕ್ಷ್ಮಣ್ ಕುಮಾರ್, ಪ್ರಧಾನ ಸಂಚಾಲಕ ಎಂ.ಆರ್.ಪೂರ್ಣೇಶ್ ಮೂರ್ತಿ, ಶಾಂತಕುಮಾರ್, ಬಿ.ಎಸ್.ಓಂಕಾರ್, ಗಣೇಶ್ ಮಗ್ಗಲಮಕ್ಕಿ, ಆರ್.ಪ್ರಕಾಶ್, ನಾಗೇಶ್ ಮಡ್ಡಿಕೆರೆ, ವಿ.ಪಿ.ನಾರಾಯಣ, ಡಿ.ಜಿ.ರಮೇಶ್ ಪಟೇಲ್ ಇತರರಿದ್ದರು.