ರೈತರ ಹೊಲದ ಕಡೆ ಕನ್ನಡ ಜಾನಪದ ಪರಿಷತ್ ನಡೆ

ಕಳಸ ಕನ್ನಡ ಜಾನಪದ ಪರಿಷತ್ ಸದಸ್ಯರು ಭತ್ತದ ಕೊಯ್ಲು ಮಾಡಿದರು. ಸುಜಯಾ ಸದಾನಂದ, ವಿನಾಯಕ, ಭರತರಾಜ್, ವಿದ್ಯಾ, ಕಲ್ಪನಾ, ಹಿತೇಶ್ ಇತರರಿದ್ದರು.
ಕಳಸ ಕನ್ನಡ ಜಾನಪದ ಪರಿಷತ್ ಸದಸ್ಯರು ಭತ್ತದ ಕೊಯ್ಲು ಮಾಡಿದರು. ಸುಜಯಾ ಸದಾನಂದ, ವಿನಾಯಕ, ಭರತರಾಜ್, ವಿದ್ಯಾ, ಕಲ್ಪನಾ, ಹಿತೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿಕರಿಗೆ ಜಾನಪದ ಪರಿಷತ್ ಬೆಂಬಲ
  • ಜಾನಪದ ಕಲೆ ಮತ್ತು ಸಂಸ್ಕೃತಿಯ ಬೇರುಗಳು ಇರುವುದೇ ಮಣ್ಣಿನ ನೆಲೆಯಲ್ಲಿ

ಕಳಸ: ರೈತನೇ ನಮ್ಮ ಸಂಸ್ಕೃತಿಯ ಮೂಲ. ಜಾನಪದ ಪರಂಪರೆ ಕೃಷಿಯೊಡನೆ ಬೆಸೆದುಕೊಂಡಿದೆ. ಹೊಲಕ್ಕೆ ಹೋಗಿ ರೈತರ ಬದುಕನ್ನು ಅರಿತುಕೊಳ್ಳುವ ಮೂಲಕ ಜಾನಪದ ಸಂಸ್ಕೃತಿಯನ್ನು ಜೀವಂತವಾಗಿಟ್ಟುಕೊಳ್ಳಬೇಕು ಎಂದು ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಅಜಿತ್ ಪ್ರಸಾದ್ ಹೇಳಿದರು.

ತಾಲೂಕು ಕನ್ನಡ ಜಾನಪದ ಪರಿಷತ್‌ನಿಂದ ಹಮ್ಮಿಕೊಂಡಿದ್ದ ರೈತರ ಹೊಲದ ಕಡೆ ಕನ್ನಡ ಜಾನಪದ ಪರಿಷತ್ ನಡೆ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಕಲೆ ಮತ್ತು ಸಂಸ್ಕೃತಿಯ ಬೇರುಗಳು ಇರುವುದೇ ಮಣ್ಣಿನ ನೆಲೆಯಲ್ಲಿ. ಕೃಷಿ ಚಟುವಟಿಕೆಯಿಂದ ದೂರವಾಗುತ್ತಿರುವ ಇಂದಿನ ಪೀಳಿಗೆಗೆ ಮಣ್ಣಿನ ಸಂಸ್ಕೃತಿ ಪರಿಚಯಿಸುವುದು ಮತ್ತು ರೈತರೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಸದಸ್ಯರೆಲ್ಲರೂ ಒಟ್ಟಾಗಿ ಪೈರು ಕೊಯ್ದ ಈ ಕ್ಷಣ ಅತ್ಯಂತ ತೃಪ್ತಿ ನೀಡಿದೆ ಎಂದರು.

ಕಜಾಪ ಮಹಿಳಾ ಘಟಕದ ಅಧ್ಯಕ್ಷೆ ಸುಜಯಾ ಸದಾನಂದ ಮಾತನಾಡಿ, ಕೃಷಿ ಕೇವಲ ಕಸುಬಲ್ಲ, ಅದು ನಮ್ಮ ಬದುಕಿನ ಶಕ್ತಿ. ಮಹಿಳೆಯರು ಕೃಷಿ ಮತ್ತು ಜಾನಪದ ಸಂಸ್ಕೃತಿ ಉಳಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಸದಸ್ಯೆ ಪ್ರತಿಮಾ ಅವರ ಗದ್ದೆಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿದ್ದು ನಮಗೆ ಹಬ್ಬದಂತಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಸಂಘಟನೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದರು.

ಎಡದಾಳು ಗ್ರಾಮದ ಕಜಾಪ ಸದಸ್ಯೆ ಪ್ರತಿಮಾ ಅವರ ಗದ್ದೆಯಲ್ಲಿ ಬೆಳೆದಿದ್ದ ಪೈರನ್ನು ಕೊಯ್ಲು ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸದಸ್ಯರೆಲ್ಲರೂ ಗದ್ದೆಗೆ ಇಳಿದು, ಸಾಂಪ್ರದಾಯಿಕ ಶೈಲಿಯಲ್ಲಿ ಪೈರು ಕೊಯ್ಲು ಮಾಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಜಾನಪದ ಹಾಡುಗಳ ಗುನುಗಿನೊಂದಿಗೆ ಸಾಗಿದ  ಕಾರ್ಯಕ್ರಮ ನೆರೆದವರಲ್ಲಿ ಸಂಭ್ರಮ ಮೂಡಿಸಿತು.

ಕಜಾಪ ತಾಲೂಕು ಅಧ್ಯಕ್ಷ ಅಜಿತ್ ಪ್ರಸಾದ್, ಉಪಾಧ್ಯಕ್ಷ ವಿನಾಯಕ, ಭರತರಾಜ್, ವಿದ್ಯಾ, ಪ್ರೇಮ್‌ಕುಮಾರ್, ಕಲ್ಪನಾ ಅಜಿತ್, ಅಮಿತಾ ವಿನಾಯಕ, ಮುರಳಿ ಭಟ್, ಹಿತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net