ಚಿಕ್ಕಮಗಳೂರಿನ ಮಧುವನ ಲೇಔಟ್‌ನಲ್ಲಿರುವ ಲಯನ್ಸ್ ಸಭಾ ಭವನದಲ್ಲಿ ಲಯನ್ಸ್ ಸಂಸ್ಥೆ ಹಾಗೂ ಕಲ್ಕಟ್ಟೆ ಪುಸ್ತಕ ಮನೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿ ತಿಪ್ಪೇರುದ್ರಪ್ಪ ಅವರನ್ನು ಸನ್ಮಾನಿಸಲಾಯಿತು.
Published on:
Copied
Follow Us
ಚಿಕ್ಕಮಗಳೂರು: ಭಾಷೆಯು ಸಂಸ್ಕೃತಿಯ ಅಭಿವ್ಯಕ್ತಿ ರೂಪ. ಅದರಲ್ಲೂ ಮಾತೃಭಾಷೆಯಾದ ಕನ್ನಡವು ನನಗೆ ಭಾವ ಸಂಸ್ಕಾರವನ್ನು ನೀಡಿದೆ. ಎಪ್ಪತ್ತೆಂಟರ ಈ ನನ್ನ ವಯಸ್ಸಿನಲ್ಲಿ ನನ್ನನ್ನು ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನನ್ನಾಗಿ ಮಾಡಿದ್ದಾರೆ ಎಂದರೆ ಅದು ಕನ್ನಡ ತಾಯಿಯ ಆಶೀರ್ವಾದ ಎಂದು ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಿ. ತಿಪ್ಪೇರುದ್ರಪ್ಪ ತಿಳಿಸಿದರು.
ನಗರದ ಮಧುವನ ಲೇಔಟ್‌ನಲ್ಲಿರುವ ಲಯನ್ಸ್ ಸಭಾ ಭವನದಲ್ಲಿ ಲಯನ್ಸ್ ಸಂಸ್ಥೆ ಹಾಗೂ ಕಲ್ಕಟ್ಟೆ ಪುಸ್ತಕ ಮನೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಒಬ್ಬ ನಿವೃತ್ತ ಶಿಕ್ಷಕ, ಹವ್ಯಾಸಿ ಪತ್ರಕರ್ತ ಸಮ್ಮೇಳನದ ಅಧ್ಯಕ್ಷನಾಗುತ್ತಿರುವುದು ಹೆಮ್ಮೆಯ ವಿಚಾರ. ಕನ್ನಡತನ ಎನ್ನುವುದೀಗ ಭಾವ ಶ್ರೀಮಂತಿಕೆಯ ದ್ಯೋತಕವಾಗಿದೆ. ಸಮ್ಮೇಳನಗಳ ಅಧ್ಯಕ್ಷರು ಉತ್ಸವ ಮೂರ್ತಿಗಳಂತಾಗದೇ, ತೆಗೆದುಕೊಂಡ ನಿರ್ಣಯಗಳ ಅನುಷ್ಠಾನಕ್ಕಾಗಿ ಸರ್ಕಾರವನ್ನು ಮುಂದೆ ನಿಂತು ಒತ್ತಾಯಿಸಬೇಕು. ಇಲ್ಲದಿದ್ದರೆ ಒಂದು, ಎರಡು ದಿನಗಳ ಸಮ್ಮೇಳನ ಅಷ್ಟೇ ದಿನದಲ್ಲಿ ಮರೆತು ಹೋಗುತ್ತದೆ ಎಂದು ಅವರು ಹೇಳಿದರು.
ಅಭಿನಂದನಾ ನುಡಿಯಾಡಿದ ಸಾಹಿತಿ ನಾಗರಾಜರಾವ್ ಕಲ್ಕಟ್ಟೆ, ಬಿ.ತಿಪ್ಪೇರುದ್ರಪ್ಪ ಜೀವನ ಪ್ರೀತಿಯ ದ್ಯೋತಕ. ಅವರ ಮನೆಗೆ ಹೋದರೆ ಸಾಹಿತ್ಯದೂಟದ ಜೊತೆಗೆ ಆದರಾತಿಥ್ಯದ ಸವಿಯೂ ಗಮನ ಸೆಳೆಯುತ್ತದೆ. ಸಮ್ಮೇಳನವು ಕೇವಲ ನೂರಾರು ಸನ್ಮಾನಗಳ ಸಂಕಲನವಾಗದAತೆ ಸರ್ವಾಧ್ಯಕ್ಷರು ಗಮನ ಹರಿಸಿದಾಗ, ಹೊಸ ಚಿಂತನ ಮಂಥನಗಳು ಮೊಳೆಯುತ್ತವೆ ಎಂದರು.
ಲಯನ್ ಕ್ಲಬ್‌ನ ನಿಕಟಪೂರ್ವ ಕಾರ್ಯದರ್ಶಿ ಗೋಪಿಕೃಷ್ಣ ಮಾತನಾಡಿ, ಕಾಲೇಜು ದಿನಗಳಲ್ಲಿ ಸಾಹಿತಿ ಹಾಗೂ ಸಮ್ಮೇಳನದ ಅಧ್ಯಕ್ಷರೂ ಆಗಿರುವ ಬಿ. ತಿಪ್ಪೇರುದ್ರಪ್ಪನವರ ಪಾಠ, ಪ್ರವಚನಗಳ ವೈಖರಿ ಮತ್ತು ವಿದ್ಯಾರ್ಥಿಗಳೊಂದಿಗಿನ ಒಡನಾಟವನ್ನು ವಿವರಿಸಿದರು.
ಸಾಹಿತಿ ರಮೇಶ್ ಬೊಂಗಾಳೆ, ಲಯನ್ ಪ್ರಾಂತೀಯ ರಾಯಭಾರಿ ವೆಂಕಟೇಶ್, ಲಯನ್ ವಲಯ ಅಧ್ಯಕ್ಷರಾದ ಜಿ. ರಮೇಶ್, ಅವರು ತಿಪ್ಪೇರುದ್ರಪ್ಪನವರ ವ್ಯಕ್ತಿತ್ವ ಹಾಗೂ ಸಾಹಿತ್ಯ ಕೃಷಿಯ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ ಅಧ್ಯಕ್ಷ ಟಿ. ನಾರಾಯಣ ಸ್ವಾಮಿ ಮಾತನಾಡಿ, ಸಮಾಜ ಸೇವೆಯ ಜೊತೆಜೊತೆಯಲ್ಲಿ ಸಾಂಸ್ಕೃತಿಕ ಸೇವೆ, ಕನ್ನಡ ಸೇವೆ ನಮ್ಮ ಸಂಸ್ಥೆಯ ಧ್ಯೇಯವಾಗಿದೆ. ಸರ್ವಹಿತ ಬಯಸಿದ ಬಿ.ಟಿ.ಆರ್. ಅಂಥವರನ್ನು ಕರೆದು ಗೌರವಿಸಿ ನಮ್ಮ ಗೌರವವನ್ನು ನಾವು ಹೆಚ್ಚಿಸಿಕೊಂಡAತಾಗಿದೆ ಎಂದರು.
ಲಯನ್ಸ್ ನಿಕಟಪೂರ್ವ ಅಧ್ಯಕ್ಷ ಸಿ. ಎನ್. ಕುಮಾರ್, ಲಯನ್ ಬಾಲಕೃಷ್ಣ, ರೇಖಾ ನಾಗರಾಜರಾವ್, ಪಾಕತಜ್ಞ ಬಾಟಾ ನಾಗೇಂದ್ರ, ಪಾಕ ಪ್ರವೀಣೆ ಮೀರಾ ನಾಗೇಂದ್ರ, ಲಯನ್ ಡಾ ಜಿ.ಟಿ.ಮಂಜುಳ ನಾರಾಯಣಸ್ವಾಮಿ, ಹಿರಿಯ ಲಯನ್ ಸದಸ್ಯ ಪುಟ್ಟಣ್ಣ ಮತ್ತು ಲಯನ್ ಶಿವಣ್ಣ ಮೊದಲಾದವರು ಉಪಸ್ಥಿತರಿದ್ದರು.