ಕಳಸ: ಗ್ರಾಮ ಅರಣ್ಯ ಸಮಿತಿಯೇ ಮುತುವರ್ಜಿ ವಹಿಸಿ ಅರಣ್ಯ ಇಲಾಖೆಗೆ ವಾಹನವನ್ನು ಕೊಡುಗೆಯಾಗಿ ನೀಡಿರುವುದು ಮಾದರಿ ಕಾರ್ಯ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಕಳಸ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳಸೇಶ್ವರ ಗ್ರಾಮಅರಣ್ಯ ಸಮಿತಿ ಅರಣ್ಯ ಇಲಾಖೆಗೆ ನೀಡಿದ ಹತ್ತು ಲಕ್ಷ ರೂ.ವೆಚ್ಚದ ಪಿಕ್‌ಅಪ್ ಗಸ್ತುವಾಹನದ ಕೀಲಿಕೈಯನ್ನು ವಲಯ ಅರಣ್ಯಾಧಿಕಾರಿ ನಿಶ್ಚಿತ್‌ಗೌಡ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಕಳಸ ಭಾಗದಲ್ಲಿ ಪ್ರವಾಸೋದ್ಯಮ ಗಮನಾರ್ಹವಾಗಿ ಬೆಳೆಯುತ್ತಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಈ ವೇಳೆಯಲ್ಲಿ ಅರಣ್ಯದ ಸುರಕ್ಷತೆ ಮತ್ತು ಗಸ್ತು ತಿರುಗುವಿಕೆ ಅನಿವಾರ್ಯ. ಈ ಹೊಸ ವಾಹನ ಇಲಾಖೆ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಜತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ಕೃಷಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ಮಾನವ ಮತ್ತು ವನ್ಯಮೃಗಗಳ ನಡುವಿನ ಸಂಘರ್ಷ ದೊಡ್ಡ ಸವಾಲಾಗಿದೆ. ರೈತರ ಬೆಳೆ ಹಾಗೂ ಜೀವ ಹಾನಿಯಾಗದಂತೆ ತಡೆಯಲು ಇಲಾಖೆ ತಕ್ಷಣ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಜನರೊಂದಿಗೆ ಸೌಹಾರ್ದತೆಯಿಂದ ವರ್ತಿಸಿ ಸಂಘರ್ಷ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಗ್ರಾಮಅರಣ್ಯ ಸಮಿತಿ ಅಧ್ಯಕ್ಷ ದಿನೇಶ್, ಮಾಜಿ ಅಧ್ಯಕ್ಷ ರುದ್ರಯ್ಯ ಆಚಾರ್, ಸಮಿತಿ ಸದಸ್ಯರಾದ ರವಿ ಕೆಳಂಗಡಿ, ರಿಜ್ವಾನ್, ಸುಧೀರ್, ಪೂರ್ಣಿಮಾ, ಸುಮನಾ, ಉಪ ವಲಯ ಅರಣ್ಯಾಧಿಕಾರಿ ಹರೀಶ್ ಹಾಗೂ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಶಾಸಕಿ ನಯನಾ ಮೋಟಮ್ಮ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ನೂತನ ವೈದ್ಯಕೀಯ ಸೌಲಭ್ಯಗಳಿಗೆ ಚಾಲನೆ ನೀಡಿದರು. ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾದ ಬ್ಲೆಡ್‌ಬ್ಯಾಂಕ್, ಅತ್ಯಾಧುನಿಕ ಎಕ್ಸ್‌ರೇ ಯಂತ್ರ ಹಾಗೂ ಟಿಬಿ (ಕ್ಷಯರೋಗ) ತಪಾಸಣಾ ಯಂತ್ರಗಳಿಗೆ ಚಾಲನೆ ನೀಡಿದರು. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಸುಸಜ್ಜಿತ ವಸತಿ ವ್ಯವಸ್ಥೆ ಕಲ್ಪಿಸುವ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಸ್ಥಳದಲ್ಲೇ ಸಮಾಲೋಚನೆ ನಡೆಸಿ ಶೀಘ್ರ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಹಳ್ಳಿ ಹಳ್ಳಿಗಳಿಗೆ ತೆರಳಿ ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವ ಸಂಚಾರಿ ಆರೋಗ್ಯ ವಾಹನದ ಸಿಬ್ಬಂದಿ ಜತೆ ಚರ್ಚೆ ನಡೆಸಿ ಈ ವ್ಯವಸ್ಥೆಯಿಂದ ಜನರಿಗೆ ಆಗುತ್ತಿರುವ ಅನುಕೂಲತೆಗಳ ಬಗ್ಗೆ ಸಾರ್ವಜನಿಕರು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.
ಆಡಳಿತ ವೈದ್ಯಾಧಿಕಾರಿ ಹರೀಶ್, ವೈದ್ಯಾಧಿಕಾರಿ ಕಾರ್ತಿಕ್ ಶೆಟ್ಟಿ ಹಾಗೂ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಇದ್ದರು.