ದೇವೇಗೌಡರಿಗೆ ಶಕ್ತಿ ತುಂಬಿದ ಕಡೂರು, ಮೂಡಿಗೆರೆ ಕ್ಷೇತ್ರಗಳು

ಕಡೂರು ತಾಲೂಕಿನ ಯಗಟಿ ಗ್ರಾಮಕ್ಕೆ ಅಗಮಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಮಾಜಿ ಶಾಸಕ ವೈ.ಎಸ್.ವಿ ದತ್ತ ಅವರನ್ನು ಕಾರ್ಯಕರ್ತ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಿದರು.
ಕಡೂರು ತಾಲೂಕಿನ ಯಗಟಿ ಗ್ರಾಮಕ್ಕೆ ಅಗಮಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಮಾಜಿ ಶಾಸಕ ವೈ.ಎಸ್.ವಿ ದತ್ತ ಅವರನ್ನು ಕಾರ್ಯಕರ್ತ ಹೂವಿನ ಹಾರ ಹಾಕುವ ಮೂಲಕ ಸ್ವಾಗತಿಸಿದರು.
Published on
ಕಡೂರು: ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ರಾಜಕೀಯ ಶಕ್ತಿ ತುಂಬುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ಕ್ಷೇತ್ರಗಳ ಪಾತ್ರ ಗಮನಾರ್ಹ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ತಾಲೂಕಿನ ಯಗಟಿ ಗ್ರಾಮದಲ್ಲಿ ಮಾಜಿ ಶಾಸಕ ವೈ.ಎಸ್.ವಿ ದತ್ತ ಅವರಿಗೆ ಜನ್ಮದಿನಾಚರಣೆ ಶುಭಾಶಯ ತಿಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ನಂತರ ಜನತಾದಳದ ಭದ್ರ ಕೋಟೆಯಾಗಿದ್ದ ಕಡೂರು ವಿಧಾನಸಭಾ ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ನಂತರವೂ ಹಲವಾರು ರಾಜಕೀಯ ವಿಪ್ಲವಗಳ ನಡುವೆಯೂ ಪಕ್ಷ ಅಸ್ತಿತ್ವ ಉಳಿಸಿಕೊಂಡಿದೆ. ಕಳೆದ 40 ವರ್ಷಗಳಲ್ಲಿ ಕೇವಲ ಎರಡು ಬಾರಿ ಮಾತ್ರ ಬೇರೆ ಪಕ್ಷಗಳು ಗೆಲುವು ದಾಖಲಿಸಿವೆ. ಕ್ಷೇತ್ರದಲ್ಲಿ ಜೆಡಿಎಸ್ ಎಂಟು ಬಾರಿ ಗೆಲುವು ದಾಖಲಿಸುವಲ್ಲಿ ದಿ.ಕೆ.ಎಂ.ಕೃಷ್ಣಮೂರ್ತಿ ಮತ್ತು ದತ್ತ ಅವರ ಕೊಡುಗೆ ಅನನ್ಯ ಎಂದರು.
ಪ್ರಸ್ತುತ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಜಿಲ್ಲೆಯ ಮೂಡಿಗೆರೆ ಮತ್ತು ಕಡೂರು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆಗಳಲ್ಲಿ ಕಣಕ್ಕಿಳಿಸುವ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.
ನನಗೆ ದತ್ತ ಅವರ ಬಗ್ಗೆ ಅಪಾರ ಗೌರವ ವಿಶ್ವಾಸವಿದೆ. ಇವರ ಮತ್ತು ದೇವೇಗೌಡರ ನಡುವಿನ ಸಂಬಂಧ ನಾಲ್ಕು ದಶಕಕ್ಕೂ ಹೆಚ್ಚು ಹಳೆಯದಾಗಿದೆ. ಈ ಕಾರಣಕ್ಕಾಗಿ ಕಡೂರು ಕ್ಷೇತ್ರದ ರಾಜಕಾರಣದಲ್ಲಿ ದತ್ತ ಅವರ ನಿರ್ಧಾರವೇ ಅಂತಿಮ. ಈ ವಿಚಾರದಲ್ಲಿ ನಾನು ಅವರ ಜತೆಗೆ ಇರುತ್ತೇನೆ ಎಂದು ಹೇಳಿದರು.
ಪಕ್ಷ ಸಂಘಟನೆ ಕುರಿತ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ಪಕ್ಷದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷನನ್ನು ಬದಲಿಸುವ ಬಗ್ಗೆ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ. 2028ರ ವಿಧಾನಸಭೆ ಚುನಾವಣೆಗೂ ಮುನ್ನ ಜಿಲ್ಲೆಯ ತಾಲೂಕು ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್, ಪ್ರೇಮ್ ಕುಮಾರ್, ಕೆ.ಎಂ.ಮಹೇಶ್ವರಪ್ಪ, ಬಿ.ಟಿ.ಗಂಗಾಧರ್ ನಾಯ್ಕ್, ಚೇತನ್ ಕೆಂಪರಾಜ್, ಮೋಹನ ಕುಮಾರ್, ಗಣೇಶ್, ಬಿಳುವಾಲ ಪ್ರಕಾಶ್ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net