ಕುಸಿಯುವ ಭೀತಿಯಲ್ಲಿ ಕೆ.ಕಣಬೂರು ಕಾಲನಿ ಸೇತುವೆ

ಎನ್.ಆರ್.ಪುರ ಮುತ್ತಿನಕೊಪ್ಪದಿಂದ, ಕುಸುಬೂರು, ದೊಡ್ಡಿನತಲೆ, ಸಾತ್ಕೋಳಿ ಸಂಪರ್ಕಿಸುವ ಕೆ.ಕಣಬೂರು ಕಾಲನಿ ಸೇತುವೆ ಕುಸಿದಿರುವುದು.
ಎನ್.ಆರ್.ಪುರ ಮುತ್ತಿನಕೊಪ್ಪದಿಂದ, ಕುಸುಬೂರು, ದೊಡ್ಡಿನತಲೆ, ಸಾತ್ಕೋಳಿ ಸಂಪರ್ಕಿಸುವ ಕೆ.ಕಣಬೂರು ಕಾಲನಿ ಸೇತುವೆ ಕುಸಿದಿರುವುದು.
Published on
ಎನ್.ಆರ್.ಪುರ: ಮುತ್ತಿನಕೊಪ್ಪದಿಂದ, ಕೆ.ಕಣಬೂರು ಕಾಲನಿ, ಕುಸುಬೂರು, ದೊಡ್ಡಿನ ತಲೆ, ಸಾತ್ಕೋಳಿ ಸಂಪರ್ಕಿಸುವ ಕೆ.ಕಣಬೂರು ಕಾಲನಿ ಸೇತುವೆ ಕುಸಿಯುವ ಹಂತಕ್ಕೆ ತಲುಪಿದೆ.
ಕೆ.ಕಣಬೂರು ಕಾಲನಿಯ ಮುಖ್ಯರಸ್ತೆಯ ಕರಿಬಸವನ ಹಳ್ಳಕ್ಕೆ ಭದ್ರಾ ನಿರ್ಮಿಸಿದ ನಂತರ ಪುನರ್ ವಸತಿ ರೈತರಿಗಾಗಿ 60 ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಭದ್ರಾ ಮೇಲ್ದಂಡೆ ಯೋಜನೆಗೆ ದೊಡ್ಡ, ದೊಡ್ಡ ವಾಹನಗಳು ಈ ಸೇತುವೆ ಮೇಲೆ ಚಲಿಸುತ್ತಿರುವುದರಿಂದ ಈ ಸೇತುವೆ ಶಿಥಿಲಾವಸ್ಥೆ ತಲುಪಿದೆ. ಸೇತುವೆ ಎರಡು ಭಾಗದ ಕೈಪಿಡಿಗಳು ಬಿದ್ದು ಹೋಗಿದೆ. ಸೇತುವೆ ಒಂದು ಭಾಗದ ಸಿಮೆಂಟ್, ಕಲ್ಲುಗಳು ಹಳ್ಳಕ್ಕೆ ಜರಿಯುತ್ತಿದೆ.
ಸಾತ್ಕೋಳಿ, ದೊಡ್ಡಿನತಲೆ, ಕುಸುಬೂರು ಹಾಗೂ ಕೆ.ಕಣಬೂರು ಗ್ರಾಮಗಳ ನೂರಾರು ಜನರು, ಶಾಲಾ ಮಕ್ಕಳು, ಮುತ್ತಿನಕೊಪ್ಪಕ್ಕೆ ಇದೇ ಸೇತುವೆ ಮೇಲೆ ಹೋಗಬೇಕಾಗಿದೆ. ಈ ಸೇತುವೆ ಕುಸಿದರೆ 4 ಗ್ರಾಮಗಳ ಜನರು, ಶಾಲಾ ಮಕ್ಕಳು ಸುತ್ತುವರಿದು ಭದ್ರಾ ಮೇಲ್ದಂಡೆ ಯೋಜನೆಯಡಿ ಬರುವ ಮೊದಲೇ ಸ್ಟೇಜ್ ಪಂಪ್ ಹೌಸ್ ಮಾರ್ಗವಾಗಿ ಮುತ್ತಿನಕೊಪ್ಪಕ್ಕೆ ಬರಬೇಕು. ಈ ರಸ್ತೆಯ ಕೆಲವು ಭಾಗದಲ್ಲಿ ಕಾಡು ಮಾರ್ಗ, ಅಲ್ಲದೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ದೊಡ್ಡ, ದೊಡ್ಡ ವಾಹನಗಳು ಬರುತ್ತಿರುವುದರಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಬೈಕ್, ಕಾರು, ಆಟೋಗಳು ಕೆಸರಿನಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ಶಾಲಾ ಮಕ್ಕಳು, ವೃದ್ಧರು ಮುತ್ತಿನಕೊಪ್ಪಕ್ಕೆ ಹೋಗಲು ಸಮಸ್ಯೆ ಉಂಟಾಗಲಿದೆ.
ಈ ಹೊಸ ಸೇತುವೆ ನಿರ್ಮಾಣಕ್ಕೆ 2.80 ಕೋಟಿ ರೂಪಾಯಿ ಮಂಜೂರಾಗಿದೆ. ಹಳೇ ಸೇತುವೆ ಪಕ್ಕದಲ್ಲಿ ಹೊಸ ಸೇತುವೆಗೆ ಕಾಮಗಾರಿ ಪ್ರಾರಂಭವಾಗಿದೆ. ಆದರೆ, ಹೊಸ ಸೇತುವೆ ಆಗುವ ಮುನ್ನವೇ ಹಳೇ ಸೇತುವೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ.
ಸೋಮವಾರ ಭದ್ರಾಮೇಲ್ದಂಡೆ ಯೋಜನೆ ಅಸಿಸ್ಟಂಟ್ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಅಧಿಕಾರಿಗಳು ಜೆಸಿಬಿ ಮೂಲಕ ಸೇತುವೆ ಕೆಳಗೆ ಹರಿಯುತ್ತಿರುವ ಹಳ್ಳದ ನೀರು ಸರಾಗವಾಗಿ ಹೋಗಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯ ಕೃಷಿಕರಾದ ರವಿಕುಮಾರ್, ಬೆಳ್ಳಪ್ಪ, ಸತೀಶ್, ಹೂವಪ್ಪ ಮುಂತಾದವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net