ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಾಣೂರು ಗ್ರಾಮದಲ್ಲಿ ೩೦ ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಶುಕ್ರವಾರ ಗುದ್ದಲಿಪೂಜೆ ನೆರೆವೇರಿಸಿದರು.
ಚಿಕ್ಕಮಗಳೂರು: ಶಿಕ್ಷಣ, ಆರೋಗ್ಯ ಮತ್ತು ಬಡವರ ಬದುಕಿಗಾಗಿ ಯೋಚನೆ ಮಾಡುತ್ತಿರುವ ಜನಪರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಸ್ತಿನಾಪುರ (ಹಳೆಹಟ್ಟಿ), ಹೊಸಹಳ್ಳಿ, ಬಾಣೂರು ಹಾಗೂ ಹುಲಿಕೆರೆ ಗ್ರಾಮಗಳಲ್ಲಿ ಸುಮಾರು ೯೦ ಲಕ್ಷ ರು.ಗಳಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ತಲಾ ೫೦ ಕೋಟಿ ಅನುದಾನ ಕೊಟ್ಟಿದ್ದು, ಅದರಲ್ಲಿ ೧೦ ಕೋಟಿ ಹಣವನ್ನು ಗ್ರಾಮೀಣ ಭಾಗಕ್ಕೆ ನೀಡಲಾಗಿದೆ. ಆ ಹಣದಲ್ಲಿ ಹಳೆಹಟ್ಟಿ ತಾಂಡ್ಯ, ಬಾಣೂರು ಹೊಸಹಳ್ಳಿಯಲ್ಲಿ ೯೦ ಲಕ್ಷ ರು. ವೆಚ್ಚದ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ಮಾಡಲಾಗಿದೆ ಎಂದರು.
ನಮ್ಮ ಸರ್ಕಾರ ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಡಿ.ಕೆ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಅವರ ಉದ್ದೇಶ ಬಡವರ ಜೀವನ ಸುಧಾರಿಸಬೇಕೆಂಬುದು. ಈ ಕಾರಣಕ್ಕಾಗಿ ನಾವು ಐದು ಗ್ಯಾರಂಟಿ ಕೊಟ್ಟಿದ್ದೇವೆ. ಎಲ್ಲರಿಗೂ ಮೂಲಭೂತ ಸೌಲಭ್ಯಗಳು ತಲುಪಿಸಬೇಕು. ಎಲ್ಲಾ ಹಳ್ಳಿಗಳಲ್ಲೂ ರಸ್ತೆ ನಿರ್ಮಾಣ ಮಾಡಬೇಕು. ಇದರ ಸದುಪಯೋಗ ಗ್ರಾಮಸ್ಥರಿಗೆ ಆಗಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ. ರಾಜ್ಯ ಸರ್ಕಾರ, ಮಹಿಳೆಯರಿಗೆ ಮಾಸಿಕ ೨,೦೦೦ ರೂ. ಹಾಗೂ ಉಚಿತ ಬಸ್ ಪ್ರಯಾಣ, ವಿದ್ಯುತ್ ಫ್ರೀ ಮಾಡದೇ ಇದ್ದಿದ್ದರೆ, ೧೦ ಕೆಜಿ ಅಕ್ಕಿ ಕೊಡದೆ ಇದ್ದಿದ್ದರೆ, ಬಡವರು ಹಾಗೂ ಮಧ್ಯಮ ವರ್ಗದ ಜನರು ನೆಮ್ಮದಿಯಾಗಿ ಜೀವ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಹುಲಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ ಜೆಜೆಎಂ, ಚೆಕ್ ಡ್ಯಾಮ್, ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಈ ಭಾಗದ ಕೆರೆ ತುಂಬಿಸುವ ಯೋಜನೆಯಲ್ಲೂ ನಾವು ಹಿಂದೆ ಬಿದ್ದಿಲ್ಲ ಎಂದ ಅವರು, ಗರ್ಕಿ ಕೆರೆ ಯೋಜನೆ ನೆನೆಗುದಿಗೆ ಬಿದ್ದಿದೆ. ಅದಕ್ಕೆ ಯಾರು ಕಾರಣ ಎಂಬುದು ಗೊತ್ತಿದೆ, ನಾನು ಜವಾಬ್ದಾರಿಯುತ ಶಾಸಕನಾಗಿದ್ದು ಸರಿಪಡಿಸುತ್ತೇನೆ. ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹಡಿಮನೆ ಸತೀಶ್, ಪುಟ್ಟೇಗೌಡ ಬಿಳೇಕಲ್, ಆನಂದ್, ರುದ್ರಮುನಿ, ಚೆಲುವಪ್ಪ ಹಾಗೂ ವೆಂಕಟೇಶ್ ಇದ್ದರು.