ಬದಲಾದ ಪರಿಸ್ಥಿತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

ಚಿಕ್ಕಮಗಳೂರಿನ ಎಐಟಿ ವೃತ್ತದ ಬಳಿ ಇರುವ ಬೆಳ್ಳಿ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎಚ್‌.ಡಿ.ತಮ್ಮಯ್ಯ, ಎಸ್‌.ಎಲ್‌.ಭೋಜೇಗೌಡ, ಎಚ್.ಪಿ.ಮಂಜೇಗೌಡ, ಎ.ಎನ್‌.ಮಹೇಶ್‌, ದಿನೇಶ್‌ ದೇವವೃಂದ, ನಂಜುಂಡೇಗೌಡ ಮತ್ತಿತರರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.
ಚಿಕ್ಕಮಗಳೂರಿನ ಎಐಟಿ ವೃತ್ತದ ಬಳಿ ಇರುವ ಬೆಳ್ಳಿ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಎಚ್‌.ಡಿ.ತಮ್ಮಯ್ಯ, ಎಸ್‌.ಎಲ್‌.ಭೋಜೇಗೌಡ, ಎಚ್.ಪಿ.ಮಂಜೇಗೌಡ, ಎ.ಎನ್‌.ಮಹೇಶ್‌, ದಿನೇಶ್‌ ದೇವವೃಂದ, ನಂಜುಂಡೇಗೌಡ ಮತ್ತಿತರರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯವಿಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ
  • ಪ್ರತಿಯೊಬ್ಬರೂ ಯೋಗವನ್ನು ದಿನನಿತ್ಯದ ಜೀವನದ ಭಾಗವಾಗಿಸಿಕೊಳ್ಳಬೇಕು
ಚಿಕ್ಕಮಗಳೂರು: ಇಂದಿನ ಬದಲಾದ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯ ನಾವು ಕಾಪಾಡಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ. ಆರೋಗ್ಯವಿಲ್ಲದಿದ್ದರೆ ನಾವು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಯೋಗವನ್ನು ದಿನನಿತ್ಯದ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಎಐಟಿ ವೃತ್ತದ ಸಮೀಪದ ಒಕ್ಕಲಿಗರ ಬೆಳ್ಳಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯಿತಿ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೧೨ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ-ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ'' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಎಂಬುದು ಸುಮ್ಮನೆ ಬರುವುದಿಲ್ಲ. ನಮ್ಮ ದೈನಂದಿನ ಚಟುವಟಿಕೆಗಳು ಮತ್ತು ಶಿಸ್ತಿನ ಮೇಲೆ ನಮ್ಮ ಆರೋಗ್ಯ ನಿರ್ಧಾರಿತವಾಗಿರುತ್ತದೆ. ಯೋಗಾಭ್ಯಾಸ ಮಾಡುವ ಆರಂಭಿಕ ಹಂತದಲ್ಲಿ ಶಾರೀರಿಕ ನೋವುಗಳು ಸಹಜ. ಆದರೆ ಆ ನೋವನ್ನು ಯಾರು ಆನಂದಿಸುತ್ತಾರೋ ಅವರಿಗೆ ಜೀವನ ಪರ್ಯಂತ ಮತ್ತೆಂದೂ ಆ ನೋವು ಮರುಕಳಿಸುವುದಿಲ್ಲ. ಕಷ್ಟಪಟ್ಟರೆ ಮಾತ್ರ ಉತ್ತಮ ಆರೋಗ್ಯ ಸಾಧ್ಯ ಎಂದರು.
ನಾವು ತೆಗೆದುಕೊಳ್ಳುವ ಆಹಾರ ಪದ್ಧತಿಯಲ್ಲಿ ನಮ್ಮ ಆರೋಗ್ಯ ಅಡಗಿದೆ. ಜೀವನದಲ್ಲಿ ಶಿಸ್ತು ಅತ್ಯಂತ ಮುಖ್ಯ. ಯಾವುದೇ ಕೆಲಸವನ್ನು ಮಾಡುವಾಗಲೂ ಸಂಯಮ, ಶಾಂತಿ ಮತ್ತು ನೆಮ್ಮದಿಯಿಂದ ಮಾಡಿದರೆ ಯಶಸ್ಸು ಲಭಿಸುತ್ತದೆ. ಅಂತಹ ಮಾನಸಿಕ ಸ್ಥೈರ್ಯವನ್ನು ಯೋಗ ನಮಗೆ ನೀಡುತ್ತದೆ ಎಂದರು.
ನಾವು ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಎಷ್ಟು ದಿನ ಆರೋಗ್ಯವಂತರಾಗಿ ಬದುಕುತ್ತೇವೆ ಎಂಬುದು ಮುಖ್ಯ. ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ದೈಹಿಕ ಯೋಗದ ಜೊತೆಗೆ ದೈವೀ ಭಾವನೆಯೂ ನಮ್ಮಲ್ಲಿ ಜಾಗೃತವಾಗಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಯೋಗ ಮಾಡುವುದರಿಂದ ಸಾವನ್ನು ಗೆಲ್ಲಲು ಸಾಧ್ಯವಿಲ್ಲ. ಆದರೆ ಭೂಮಿ ಮೇಲೆ ಬದುಕಿರುವವರೆಗೂ ಆರೋಗ್ಯವಂತರಾಗಿ ಜೀವನ ಸಾಗಿಸಲು ಯೋಗ ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗ ವಿಜ್ಞಾನವನ್ನು ಋಷಿಮುನಿಗಳು ಹಾಗೂ ಯೋಗಿಗಳು ನಮಗೆ ಧಾರೆ ಎರೆದಿದ್ದಾರೆ. ಇಂದು ಜಗತ್ತಿನ ನೂರಾರು ದೇಶಗಳು ಒಂದೇ ಸಮಯದಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಭಾರತ ಸರ್ಕಾರದ ಪ್ರಧಾನಮಂತ್ರಿ ಅವರ ಈ ದೂರದೃಷ್ಟಿಯ ಪ್ರಯತ್ನಕ್ಕೆ ಅಭಿನಂದನೆಗಳು ಸಲ್ಲಬೇಕು ಎಂದರು.
ವರನಟ ಡಾ. ರಾಜ್‌ಕುಮಾರ್ ಅವರ ಯೋಗಾಸಕ್ತಿ ಮತ್ತು ಜೀವನ ಶೈಲಿ ಸ್ಮರಿಸಿದ ಶಾಸಕರು, ರಾಜಕುಮಾರ್ ಅವರಂತೆ ಯೋಗ ಮಾಡಿದವರು ಯಾರೂ ಇಲ್ಲ. ಅವರು ತಮ್ಮ ಚಿತ್ರಗಳಲ್ಲಿ ಇಡೀ ಹೊಟ್ಟೆಯನ್ನೇ ತಿರುಗಿಸುವ ನೌಲಿ ಕ್ರಿಯೆಯನ್ನು ಪ್ರದರ್ಶಿಸುತ್ತಿದ್ದರು. ಅವರು ೭೫ ವರ್ಷ ಬದುಕಿದ್ದರೂ ಎಷ್ಟು ಆರೋಗ್ಯವಾಗಿದ್ದರು ಎಂಬುದು ಅವರ ಹತ್ತಿರವಿದ್ದವರಿಗೆ ಗೊತ್ತು. ಅವರ ಊಟ ಮತ್ತು ತಿಂಡಿ ಕ್ರಮದಲ್ಲಿ ಯಾವುದೇ ರಾಜಿ ಇರಲಿಲ್ಲ. ಚೆನ್ನಾಗಿ ಊಟ ಬಲ್ಲವನೇ ಚೆನ್ನಾಗಿ ಆರೋಗ್ಯ ಕಾಪಾಡಿಕೊಳ್ಳಬಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಅತ್ಯಂತ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಯೋಗವು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢವಾಗಿಡಲು ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.
ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ನಮ್ಮ ದಿನನಿತ್ಯದ ಬದುಕಿನಲ್ಲಿ ಕನಿಷ್ಟ ಸ್ವಲ್ಪ ಸಮಯವನ್ನಾದರೂ ಯೋಗಕ್ಕಾಗಿ ಮೀಸಲಿಡಬೇಕು. ಪ್ರತಿದಿನವೂ ನಿಯಮಿತವಾಗಿ ಯೋಗಾಭ್ಯಾಸ ಮಾಡುವುದನ್ನು ಹವ್ಯಾಸವಾಗಿಸಿಕೊಳ್ಳಬೇಕು. ಆ ಮೂಲಕ ಸದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದರು.
ಈ ಸಂದರ್ಭದಲ್ಲಿ ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ಜಿಲ್ಲಾ ಆರೋಗ್ಯಾಧಿಕಾರಿ ಅಶ್ವತ್‌ಬಾಬು, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮುಂತಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net