ಕುಟುಂಬದ ಸಂರಕ್ಷಣೆಗೆ ವಿಮೆಯ ರಕ್ಷಣೆ ಅಗತ್ಯ

ಶೃಂಗೇರಿಯ ಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ವಿಶೇಷ ನೋಂದಣಿ ಮತ್ತು ಜಾಗೃತಿ ಶಿಬಿರ  ನಡೆಸಲಾಯಿತು.
ಶೃಂಗೇರಿಯ ಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ವಿಶೇಷ ನೋಂದಣಿ ಮತ್ತು ಜಾಗೃತಿ ಶಿಬಿರ ನಡೆಸಲಾಯಿತು.
Published on
ಶೃಂಗೇರಿ: ತಾಲೂಕಿನ ಕೆರೆ ಗ್ರಾಪಂ ವ್ಯಾಪ್ತಿಯ ಜನರ ಜೀವನ ಭದ್ರತೆ ಹಾಗೂ ಪೂರ್ಣವಿಮೆ ಸುರಕ್ಷಿತ ಗ್ರಾಮದ ಅಭಿಯಾನದ ಅಂಗವಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನೆ ಸಂಸ್ಥೆಯಿಂದ ವಿಶೇಷ ನೋಂದಣಿ ಮತ್ತು ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಆದರ್ಶ ಮಾತನಾಡಿ, ಪ್ರತಿ ಒಬ್ಬ ವ್ಯಕ್ತಿಯು ಅರ್ಥಿಕ ಸಬಲತೆ ಮೂಲಕ ತನ್ನ ಹಾಗೂ ಕುಟುಂಬದ ಸಂರಕ್ಷಣೆಗಾಗಿ ವಿವಿಧ ಯೋಜನೆಗಳ ಮೂಲಕ ಹಣ ಸಂಗ್ರಹಿಸುಡುತ್ತಾನೆ. ವಿಮೆ ಕೂಡಾ ಜೀವನದ ಭದ್ರತೆಗೆ ಅತಿ ಅಗತ್ಯ. ಸರ್ಕಾರದ ಎರಡು ಉಪಯುಕ್ತ ವಿಮಾ ಯೋಜನೆಗಳಾದ ಪಿಎಂಎಸ್‌ಬಿವೈ ಮತ್ತು ಪಿಎಂಜೆಜೆಬಿವೈ ವಿಮೆ ಕುಟುಂಬಕ್ಕೆ ಅರ್ಥಿಕ ಭದ್ರತೆ ನೀಡುತ್ತದೆ. ಕಡಿಮೆ ಪ್ರೀಮಿಯಂ ಲಭ್ಯವಿರುವ ಈ ಯೋಜನೆಗಳ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಾಯಕ ನಿರ್ದೇಶಕ ರವಿಕುಮಾರ್ ಚೌಹಾಣ್ ಮಾತನಾಡಿ, ಜೀವನದಲ್ಲಿ ಅನಿರೀಕ್ಷಿತವಾಗಿ ಅಪಘಾತ ಹಾಗೂ ಸಾವು ಸಂಭವಿಸಿದಾಗ ಕುಟುಂಬಕ್ಕೆ ದೊಡ್ಡ ಅರ್ಥಿಕ ಹೊರೆ ಎದುರಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸರ್ಕಾರಿ ಯೋಜನೆಗಳ ವಿಮೆ ಮಾಡಿಸಬೇಕು. ಯೋಜನೆಯ ಕುರಿತು ಸರ್ವರೂ ಮಾಹಿತಿ ತಿಳಿದು ಕುಟುಂಬದ ಶ್ರೇಯಸ್ಸಿಗಾಗಿ ಅರ್ಥಿಕ ಭದ್ರತೆ ಹೊಂದಿರಬೇಕು ಎಂದರು.
ಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕಿ ಸುಪ್ರೀತಾ ಹೆಗ್ಡೆ ಮಾತನಾಡಿ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಮೊತ್ತ ವರ್ಷಕ್ಕೆ ಕೇವಲ 20ಆಗಿದ್ದು ಅಪಘಾತದ ವಿಮೆ ಪಡೆಯಬಹುದು. ಅವಘಡ ಸಂಭವಿಸಿ ಮರಣ ಹೊಂದಿದವರ ಕುಟುಂಬಕ್ಕೆ 2 ರೂ.ಲಕ್ಷ ಅರ್ಥಕ ಭದ್ರತೆ ದೊರಕುತ್ತದೆ. ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ವರ್ಷಕ್ಕೆ 436 ರೂ. ಪ್ರೀಮಿಯಂ ಆಗಿದ್ದು, ವಿಮಾದಾರರು ಮೃತಪಟ್ಟರೆ ಎರಡು ಲಕ್ಷ ರೂ. ಸಿಗಲಿದೆ ಎಂದರು.
ಗ್ರಾಪಂ ಕಾರ್ಯದರ್ಶಿ ಅನ್ನಪೂರ್ಣ, ಸಂಜೀವಿನಿ ಒಕ್ಕೂಟದ ಪದಾಧಿಕಾರಿ ನಾಗರತ್ನ, ರಮ್ಯಕಲಾ, ಅನುರಾಧ, ರೇವತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net