ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಅವಮಾನ

ಬಿ.ಎಸ್.ಜಯರಾಮ್
ಬಿ.ಎಸ್.ಜಯರಾಮ್
Published on
ಮೂಡಿಗೆರೆ: ಡಿ.ಕೆ.ಶಿವಕುಮಾರ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವೇಳೆ ಚಿಕ್ಕಮಗಳೂರು ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರನ್ನು ಕೊನೆ ಕ್ಷಣದಲ್ಲಿ ಕೈಬಿಟ್ಟು ಜಿಲ್ಲೆಗೆ ಅವಮಾನ ಮಾಡಲಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಸ್.ಜಯರಾಮ್ ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದಾರೆ. ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಒಬ್ಬರಿಗಾದರೂ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕಾಗಿತ್ತು. ಕಳೆದ 20 ವರ್ಷದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರವಿಲ್ಲದೆ ವನವಾಸ ಅನುಭವಿಸಿದೆ. 2023ರ ಚುನಾವಣೆಯಲ್ಲಿ ಕಾರ್ಯಕರ್ತರು ಮುಗಿಬಿದ್ದು ಕಾಂಗ್ರೆಸ್ ಪಕ್ಷದ ಪರ ಹಗಲು ರಾತ್ರಿಯೆನ್ನದೆ ಪ್ರಚಾರ ನಡೆಸಿ ಬಿಜೆಪಿ ಕೋಟೆಯನ್ನು ಛಿದ್ರ ಮಾಡಿದ್ದರಿಂದ ಜಿಲ್ಲೆಯಲ್ಲಿ 5 ಮಂದಿ ಕಾಂಗ್ರೆಸ್ ಶಾಸಕರು ಆಯ್ಕೆಯಾದರು ಎಂದರು.
ಮಾಜಿ ಸಚಿವ ಬೇಗಾನೆ ರಾಮಯ್ಯ ಅವರ ಪುತ್ರಿ ಆರತಿ ಕೃಷ್ಣ ಮತ್ತು ಗಾಯಿತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. 7 ಮಂದಿ ಶಾಸನಸಭೆಯ ಸದಸ್ಯರನ್ನು ಬದಿಗಿಟ್ಟು ಸಚಿವ ಸಂಪುಟ ರಚಿಸಿರುವುದು ಜಿಲ್ಲೆಗೆ ಮಾಡಿರುವ ಅನ್ಯಾಯವಾಗಿದೆ. ಇಂತಹ ಅನ್ಯಾಯ ಸಹಿಸಲಾಗದು ಕೂಡಲೇ ಒಬ್ಬರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
1978ರಲ್ಲಿ ಇಂದಿರಾಗಾಂಧಿ ಅವರಿಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಜಿಲ್ಲೆಯನ್ನು ಕಾಂಗ್ರೆಸ್ ನಾಯಕರು ಕಡೆಗಣಿಸಬಾರದು. ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಅವರ ಹೆಸರನ್ನು ಸಚಿವರ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಸೇರ್ಪಡೆಗೊಳಿಸಿ ರಾಜ್ಯದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಬಳಿ ನೂತನ ಸಚಿವರ ಪಟ್ಟಿಯನ್ನು ಹೈಕಮಾಂಡ್ ಕಳಿಸಿಕೊಟ್ಟಿದೆ. ಗಾಯಿತ್ರಿ ಶಾಂತೇಗೌಡ ಅವರನ್ನು ಪ್ರಮಾಣವಚನ ಸ್ವೀಕರಿಸಲು ಲೋಕಭವನಕ್ಕೆ ತೆರಳುವಂತೆ ಅಧಿಕೃತ ಆಹ್ವಾನ ನೀಡಿದ್ದರಿಂದ ಗಾಯಿತ್ರಿ ಶಾಂತೇಗೌಡ ಅವರು ಪ್ರಮಾಣ ವಚನ ಸ್ವೀಕರಿಸಲು ಬೆಂಗಳೂರಿಗೆ ತಮ್ಮ ಬೆಂಬಲಿಗರೊಂದಿಗೆ ತೆರಳಿದ್ದಾರೆ. ಪ್ರಮಾಣವಚನ ಸ್ವೀಕಾರಕ್ಕೆ 2 ಗಂಟೆ ಇದ್ದಂತೆ ಗಾಯಿತ್ರಿ ಅವರ ಹೆಸರನ್ನು ಕೈ ಬಿಡಲಾಗಿದೆ. ಇದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
1999 ರಲ್ಲಿ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಮೋಟಮ್ಮ, ಡಿ.ಬಿ.ಚಂದ್ರೇಗೌಡ, ಸಿ.ಆರ್.ಸಗೀರ್ ಅಹಮದ್ ಈ ಮೂವರು ಸಚಿವರಾಗಿದ್ದರು. 2004ರ ನಂತರ ಬಂದ ಸರ್ಕಾರಗಳು ಜಿಲ್ಲೆಗೆ ಸಮರ್ಪಕವಾಗಿ ಪ್ರಾತಿನಿಧ್ಯ ನೀಡಿಲ್ಲ. ಹೊರಗಿನವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗುತ್ತದೆ. ಹಾಗೆ ನೇಮಕವಾದ ಸಚಿವರು ಜಿಲ್ಲೆಯ ಅನೇಕ ಸಮಸ್ಯೆಗಳ ಬಗ್ಗೆ ಮತ್ತು ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು.
ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಹೈಕಮಾಂಡ್ ಆದೇಶದಂತೆ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net