ಆಲ್ದೂರು: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡ ನಿರ್ಮಾಣ ಸ್ಥಳವನ್ನು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಬುಧವಾರ ಪರಿಶೀಲಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಿಸಿ ನೂರು ವರ್ಷಗಳಾಗಿದ್ದು ಶಿಥಿಲಾವಸ್ಥೆಗೆ ತಲುಪಿದೆ. ಚಿಕ್ಕಮಗಳೂರು ವಿದ್ಯಾ ಕಾಫಿ ಸಂಸ್ಥೆಯಿಂದ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ಶಾಲೆಯ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ವಿದ್ಯಾ ಕಾಫಿ ಸಂಸ್ಥೆ ಮಾಲೀಕರಿಗೆ ಶಾಲೆಯಿಂದ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿದ್ದರು.
ಈ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾಡಲು ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಇದೇ ಮಾದರಿಯಲ್ಲಿ ಶಾಲೆ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಿದ್ದು, ಕಟ್ಟಡ ನಿರ್ಮಾಣ ಸ್ಥಳವನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.
ಬಿಇಒ ರುದ್ರಪ್ಪ, ಕಾಂತರಾಜ್, ವಿದ್ಯಾ ಕಾಫಿ ಸಂಸ್ಥೆ ಸಿಇಒ ಭಾನುಪ್ರಕಾಶ್, ರಾಜಸ್ವ ನಿರೀಕ್ಷಕ ಪ್ರದೀಪ್, ಉಪ ತಹಸೀಲ್ದಾರ್ ಜ್ಯೋತಿ, ಶ್ರೀ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಸುರೇಶ್, ಶಾಲೆ ಮುಖ್ಯಶಿಕ್ಷಕ ಸುರೇಶ್, ಕಮಲಾಕ್ಷಿ, ಗೀತಾ, ಶರತ್, ಪ್ರವೀಣ್, ಪರಮೇಶ್ ಮತ್ತಿತರರಿದ್ದರು.