ನಿವೇಶನಕ್ಕಾಗಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ವಾಪಸ್
ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಗೋಣಿಬೀಡು ಗ್ರಾಪಂ ವ್ಯಾಪ್ತಿಯ ನಿವೇಶನರಹಿತರು ತಹಸೀಲ್ದಾರ್ ರಶ್ಮಿಗೆ ದಾಖಲೆ ಸಲ್ಲಿಸಿದರು. ಕೆ.ಕೆ.ಕೃಷ್ಣಪ್ಪ, ಭರತ್, ಸುರೇಶ್, ಶೇಖರ್, ಜೈಕುಮಾರ್, ಆಶಾ ಇತರರಿದ್ದರು.
ಮೂಡಿಗೆರೆ: ಗೋಣಿಬೀಡು ಗ್ರಾಪಂ ವ್ಯಾಪ್ತಿಯ ನಿವೇಶನರಹಿತರು 10 ದಿನಗಳಿಂದ ಟೆಂಟ್ ನಿರ್ಮಿಸಿಕೊಂಡು ನಡೆಸುತ್ತಿದ್ದ ಧರಣಿಯನ್ನು ಸೋಮವಾರ ಹಿಂಪಡೆದಿರುವುದಾಗಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ತಿಳಿಸಿದರು.
ನಿವೇಶನ ನೀಡುವಂತೆ ಒತ್ತಾಯಿಸಿ ಟಿಯುಸಿಐ, ವಸತಿಗಾಗಿ ಹೋರಾಟ ವೇದಿಕೆಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಂತರ, ಟೆಂಟ್ ನಿರ್ಮಿಸಿಕೊಂಡು ಧರಣಿ ನಡೆಸುತ್ತಿದ್ದ ಎಲ್ಲರೂ ನಿವೇಶನರಹಿತರು ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಸಲ್ಲಿಸಿ ಮಾತನಾಡಿದರು.
ಗೋಣಿಬೀಡು ಗ್ರಾಮದ ಮಣ್ಣಿಕೆರೆ ಎಂಬಲ್ಲಿ ನಿವೇಶನಕ್ಕಾಗಿ ಕಾಯ್ದಿರಿಸಿರುವ ಜಾಗದಲ್ಲಿ ನಿವೇಶನರಹಿತರು, ಗುಡಿಸಲು ನಿರ್ಮಿಸಿಕೊಂಡು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ನಾಲ್ಕು ದಿನದ ಹಿಂದೆ ತಹಸೀಲ್ದಾರ್ ಎಸ್.ಅಶ್ವಿನಿ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಟೆಂಟ್ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲೇ ನಿವೇಶನ ಮಂಜೂರು ಮಾಡಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ತಿಂಗಳೊಳಗೆ ನಿವೇಶನ ಸಿಗುವ ಭರವಸೆ ಸಿಕ್ಕಿದ್ದರಿಂದ ಧರಣಿ ಹಿಂತೆಗೆದುಕೊಂಡಿದ್ದೇವೆ ಎಂದರು.
ಅರ್ಹ ನಿವೇಶನರಹಿತರು ದಾಖಲಾತಿಗಳನ್ನು ನೇರವಾಗಿ ನನಗೆ ನೀಡಿ ಎಂದು ತಹಸೀಲ್ದಾರ್ ಮೌಖಿಕವಾಗಿ ಸೂಚಿಸಿದ್ದರು. ಅದರಂತೆ ಪ್ರತಿಯೊಬ್ಬರೂ ದಾಖಲೆಗಳನ್ನು ನೀಡಿದ್ದಾರೆ. ತಹಸೀಲ್ದಾರ್ ನೀಡಿರುವ ಭರವಸೆಯಂತೆ ಒಂದು ತಿಂಗಳೊಳಗೆ ನಿವೇಶನ ಹಂಚಿಕೆ ಮಾಡಬೇಕು. 10 ದಿನದಿಂದ ಟೆಂಟ್ ನಿರ್ಮಿಸಿಕೊಂಡು ಧರಣಿ ನಡೆಸುತ್ತಿದ್ದ ನಿವೇಶನರಹಿತರಾದ ನಾವೆಲ್ಲ ತಹಸೀಲ್ದಾರ್ ಭರವಸೆಗೆ ಮಣಿದು ಟೆಂಟ್‌ಗಳನ್ನು ತೆರವುಗೊಳಿಸಿದ್ದೇವೆ. ಜೆಸಿಬಿ ಮೂಲಕ ತಾಲೂಕು ಆಡಳಿತದಿಂದ ಸಮತಟ್ಟು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೆಪಿಸಿಸಿ ಸದಸ್ಯ ಭರತ್ ಕೆ. ಉಪ್ಪಳ್ಳಿ ಮಾತನಾಡಿ, ಗೋಣಿಬೀಡು ಗ್ರಾಮ ಪಂಚಾಯಿತಿಗೆ ನಿವೇಶನರಹಿತರು 8 ಬಾರಿ ದಾಖಲೆಗಳನ್ನು ನೀಡಿದ್ದರೂ ಪ್ರಯೋಜನವಾಗಿಲ್ಲ. ತಹಸೀಲ್ದಾರ್ ನೀಡಿರುವ ಭರವಸೆಯನ್ನು ನಂಬಿ ಮತ್ತೊಮ್ಮೆ ದಾಖಲೆಗಳನ್ನು ನೀಡಿದ್ದೇವೆ. ನಿವೇಶನ ಒದಗಿಸಲು ತಪ್ಪಿದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.