ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರಶ್ಮಿ ಮಾತನಾಡಿ, ಮಲೆನಾಡು ಕಾಫಿ ಬೆಳೆಯುವ ಪ್ರದೇಶವಾಗಿದ್ದು, ಅದೆ ರೀತಿ ರೈತರು ತಮ್ಮ ಜಮೀನಿನಲ್ಲಿ ಭತ್ತ, ಬಾಳೆ, ತರಕಾರಿ ಸೇರಿದಂತೆ ಇನ್ನಿತರೆ ಬೆಳೆ ಬೆಳೆಯಲು ಉತ್ಸಾಹ ತೋರಬೇಕು. ಭತ್ತದ ಬೆಳೆಯಲ್ಲಿ ಲಾಭಾಂಶ ಕಡಿಮೆ ಎಂಬ ಭಾವನೆ ಮೂಡುವುದು ಸಹಜ, ಆದರೆ ಭತ್ತದ ಬೆಳೆ ರೈತರನ್ನು ಎಂದೂ ಕೈ ಬಿಟ್ಟಿಲ್ಲ. ಹಿಂದೆ ತಾಲೂಕಿನಲ್ಲಿ ಸಾವಿರಾರು ಹೆಕ್ಟರ್ ಜಮೀನಿನಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಈಗ ಭತ್ತದ ಬೆಳೆ ಕಡಿಮೆಯಾಗಿದೆ. ರೈತರು ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ಸರಿಯಾಗಿ ಮನೆಯಲ್ಲಿ ತಯಾರಿಸಿದ ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕ ಬಳಸಿ ಕೃಷಿ ಚಟುವಟಿಕೆ ನಡೆಸಿದರೆ ಅಧಿಕ ಇಳುವರಿ ಜತೆಗೆ ರೈತರ ಕೈಗೆ ಹೆಚ್ಚು ಲಾಭಾಂಶ ದೊರೆಯಲಿದೆ ಎಂದು ತಿಳಿಸಿದರು.