ಮಳೆಯಾಗದಿದ್ದರೆ ಮೇವು, ಕುಡಿಯುವ ನೀರಿನ ಸಮಸ್ಯೆ ಉಲ್ಪಣ

ಕಡೂರು ತಾಲೂಕಿನ ಕಲ್ಕೆರೆಯ ಕುಕ್ಕಸಮುದ್ರ ಕೆರೆಯನ್ನು ಮಾಜಿ ಶಾಸಕ ವೈಎಸ್‌ವಿ ದತ್ತ ವೀಕ್ಷಿಸಿದರು.
ಕಡೂರು ತಾಲೂಕಿನ ಕಲ್ಕೆರೆಯ ಕುಕ್ಕಸಮುದ್ರ ಕೆರೆಯನ್ನು ಮಾಜಿ ಶಾಸಕ ವೈಎಸ್‌ವಿ ದತ್ತ ವೀಕ್ಷಿಸಿದರು.
Published on
ಕಡೂರು: ಕ್ಷೇತ್ರದಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.
ಯಗಟಿ, ಚೌಳಹಿರಿಯರು ಹೋಬಳಿ ಭಾಗದ ಗ್ರಾಮಗಳಲ್ಲಿ ಬರ ಅಧ್ಯಯನದ ಪ್ರವಾಸದ ಹಿನ್ನೆಲೆಯಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ಮಾತನಾಡಿ, ವರುಣನ ಮುನಿಸಿನಿಂದ ಹಳ್ಳಿಗಳ ಕೆರೆಕಟ್ಟೆಗಳು ಬರಿದಾಗಿವೆ. ಮುಖ್ಯವಾಗಿ ಹೈನುಗಾರಿಕೆ ಅವಲಂಬಿತರಾಗಿದ್ದ ರೈತಾಪಿ ವರ್ಗಕ್ಕೆ ಮೇವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ ಎಂದರು.
ತಾಲೂಕಿನ ಬಹುತೇಕ ರೈತರು ಜಾನುವಾರುಗಳಿಗೆ ಮೇವು ಹಾಕಲಾರದ ಪರಿಸ್ಥಿತಿಯಿಂದ ಮಾರುವ ಸ್ಥಿತಿಗೆ ತಲುಪಿದ್ದಾರೆ. ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕಲ್ಕೆರೆಯ ಕುಕ್ಕಸಮುದ್ರ ಕೆರೆ ಒಡಲು ಸಂಪೂರ್ಣ ಒಣಗಿದೆ. ಗ್ರಾಮೀಣ ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು•ಸರಬರಾಜು ಮಾಡುತ್ತಿರುವ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪಶು ಇಲಾಖೆ ಅಧಿಕಾರಿಗಳು ಮೇವಿನ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಅದರೆ ವಾಸ್ತವದ ಚಿತ್ರಣವೇ ಬೇರೆಯಾಗಿದೆ. ಇದರ ನಡುವೆ ಸರ್ಕಾರದಿಂದ ದೊರೆಯುತ್ತಿದ್ದ ಪ್ರೋತ್ಸಾಹಧನ ಸ್ಥಗಿತಗೊಂಡಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದರು.
ಪಶು ಸಂಗೋಪನ ಇಲಾಖೆ ತಾಲೂಕಿನಲ್ಲಿ ಮೇವಿನ ಅಭಾವ ಎದುರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸೂಕ್ತ ವ್ಯವಸ್ಥೆ ಮಾಡಲು ಮುಂದಾಗಬೇಕು. ಬರ ಪರಿಸ್ಥಿತಿ ಎದುರಿಸಲು ಸಾಧ್ಯವಾಗಬಹುದಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಕಂದಾಯ ಇಲಾಖೆ ತುರ್ತು ಪರಿವೀಕ್ಷಣೆ ನಡೆಸಿ ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಎಲ್ಲ ಹೋಬಳಿ ಮಟ್ಟದಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿ ವಾಸ್ತವಿಕ ವರದಿಯನ್ನು ಪಕ್ಷಕ್ಕೆ ಸಲ್ಲಿಸಲಾಗುವುದು. ಹಾಗೂ ಸರ್ಕಾರದ ಗಮನಕ್ಕೂ ತರುವ ಮೂಲಕ ರೈತರಿಗೆ ನೆರವಾಗಲಾಗುವುದು ಎಂದರು.
ಯಗಟಿ, ಚೌಳಹಿರಿಯರು ಹೋಬಳಿ ಭಾಗದ ಗುಡ್ಡೇಹಳ್ಳಿ, ಹರಿಸಮುದ್ರ, ಜಿ.ಯರದಕೆರೆ, ವಕ್ಕಲಗೆರೆ, ಭೈರಗೊಂಡನಹಳ್ಳಿ, ಕಲ್ಕರೆ, ಅಂತರಘಟ್ಟೆ, ಚಿಕ್ಕನಲ್ಲೂರು, ಆಸಂದಿ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಸ್ಥಳೀಯ ಮುಖಂಡರಾದ ಹರ್ಷಿತ್, ಮಂಜುನಾಥ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net