ಮಳೆಯಾಗದಿದ್ದರೆ ಕುಡಿಯುವ ನೀರಿಗೂ ತತ್ವಾರ

ವೈಎಸ್‌ವಿ ದತ್ತ
ವೈಎಸ್‌ವಿ ದತ್ತ
Published on
ಕಡೂರು: ಮುಂಗಾರು ಮಳೆ ಈಗಾಗಲೇ ಕೈಕೊಟ್ಟ ಪರಿಣಾಮ ಬರುವ ದಿನಗಳಲ್ಲಿ ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೂ ಕ್ಷೇತ್ರದಲ್ಲಿ ತತ್ವಾರ ಎದುರಾಗಬಹುದೆಂಬ ಆತಂಕ ಕಾಡುತ್ತಿದೆ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.
ಮುಂಗಾರು ಸಂಪೂರ್ಣ ವಿಲವಾಗಿದ್ದು, ಹತ್ತಾರು ದಿನಗಳಲ್ಲಿ ಮಳೆ ಬಾರದಿದ್ದರೆ ಭಿತ್ತನೆ ಕಾರ್ಯ ಶೂನ್ಯಕ್ಕೆ ಇಳಿಯುವುದು ಖಚಿತ ಎಂದು ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿ, ನಮ್ಮ ಪಕ್ಷದಿಂದ ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಿ ವರದಿ ನೀಡಲು ಪ್ರಾದೇಶಿಕವಾರು ಉಸ್ತುವಾರಿಗಳನ್ನು ನೇಮಿಸಿದೆ. ಕಡೂರು ಕ್ಷೇತ್ರಕ್ಕೆ ಉಸ್ತುವಾರಿಯನ್ನಾಗಿ ನನ್ನನ್ನು ನೇಮಿಸಿದೆ. ಜು.17ರಿಂದ ಹೋಬಳಿವಾರು ಗ್ರಾಮ ಭೇಟಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜು.17 ಬೀರೂರು, 18 ಯಗಟಿ, ಚೌಳಹಿರಿಯೂರು ಮತ್ತು ಹಿರೇನಲ್ಲೂರು,19 ಪಂಚನಹಳ್ಳಿ, ಸಿಂಗಟಗೆರೆ, ಕಡೂರು ಕಸಬಾ ಹೋಬಳಿ ಭಾಗಗಳ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವರದಿ ತಯಾರಿಸಿ ಪಕ್ಷಕ್ಕೆ ಮತ್ತು ಸರ್ಕಾರದ ಗಮನಕ್ಕೆ ತರಲಾಗುವುದು. ಜೂನ್ 1ರಿಂದ 31ರ ತನಕ ವಾಡಿಕೆ ಮಳೆ ಕಡಿಮೆಯಾಗಿದೆ. ಕಸಬಾ, ಹಿರೇನಲ್ಲೂರು, ಯಗಟಿ, ಚೌಳಹಿರಿಯೂರು ಹೋಬಳಿಗಳಲ್ಲಿ ಸರಾಸರಿ ಶೇ.20 ರಷ್ಟು ಮಳೆ ಕೊರತೆಯಾಗಿದೆ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ರಾಗಿ, ಜೋಳ ಬಿತ್ತನೆ ಪೂರ್ಣ ಶೂನ್ಯವಾಗಲಿದೆ ಎಂದು ಆತಂಕವ್ಯಕ್ತಪಡಿಸಿದರು.
ಬರಗಾಲ ಬಂದಾಗ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಬರಪೀಡಿತ ಎಂದು ಘೋಷಿಸಬೇಕಾಗುತ್ತದೆ. ಅದರೆ ಕಡೂರು ತಾಲೂಕಿನಲ್ಲಿ ಮಳೆ ಪ್ರಮಾಣ ಲೆಕ್ಕ ಹಾಕಿದರೆ ಕಡೂರಿಗೆ ಖಂಡಿತ ನಷ್ಟವಾಗುತ್ತದೆ. ಎರಡು ಹೋಬಳಿಗಳಲ್ಲಿ ಮಳೆ ಉತ್ತಮವಾಗಿದೆ. ಉಳಿದ ಕಡೆ ಮಳೆಯೇ ಇಲ್ಲ. ಸರಾಸರಿ ಮಳೆ ಪ್ರಮಾಣಲೆಕ್ಕ ಹಾಕಿದರೆ ಉತ್ತಮ ಮಳೆಯಾಗಿದೆ ಎಂಬ ವರದಿ ಬರುತ್ತದೆ. ಹಾಗಾಗಿ ಬರದ ಪ್ರಮಾಣವನ್ನು ಹೋಬಳಿವಾರು ಲೆಕ್ಕ ಹಾಕಿದಾಗ ಬರಗಾಲ ಪೀಡಿತ ಪ್ರದೇಶಕ್ಕೆ ದೊರೆಯುವ ಪರಿಹಾರ ಪಡೆಯಲು ಸಾಧ್ಯ ಎಂದರು.
ಜೆಡಿಎಸ್ ಮುಖಂಡರಾದ ಬಿ.ಟಿ.ಗಂಗಾಧರನಾಯ್ಕ, ಪಾಲಾಕ್ಷಪ್ಪ, ಬೀರೂರು ಮೋಹನ್, ಗಣೇಶ್, ಕೃಷ್ಣನಾಯ್ಕ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net