ತರೀಕೆರೆ ಅಗ್ನಿ ಶಾಮಕ ಇಲಾಖೆಯಿಂದ ಏರ್ಪಡಿಸಿದ್ದ ಬೆಂಕಿ ಅವಘಡ ನಿಯಂತ್ರಣ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು. ತಿಪ್ಪೇಸ್ವಾಮಿ, ಸಹನಾ, ಸುನೀತಾ, ರಶ್ಮಿ, ವಿಜಯಾ, ರೋಹಿಣಿ ಇತರರಿದ್ದರು.
ತರೀಕೆರೆ: ಅಗ್ನಿ ಅವಘಡಗಳು ಸಂಭವಿಸಿದಾಗ ಜನ ಜಾಗರೂಕರಾಗಿ ನಂದಿಸಬೇಕು. ಸಮಯ ವ್ಯರ್ಥ ಮಾಡದೆ ತಕ್ಷಣವೇ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಅಗ್ನಿ ಶಾಮಕ ಇಲಾಖೆ ಠಾಣಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು.
ಮಮತಾ ಮಹಿಳಾ ಸಮಾಜದಲ್ಲಿ ಏರ್ಪಡಿಸಿದ್ದ ಅಗ್ನಿ ಸುರಕ್ಷೆ ಹಾಗೂ ಅಗ್ನಿ ಅವಘಡಗಳ ಕುರಿತಾದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬೆಂಕಿ ಉರಿಯಲು ಇಂಧನ, ಉಷ್ಣತೆ ಮತ್ತು ಆಮ್ಲಜನಕ ಅವಶ್ಯಕವಾಗಿದೆ. ಬೆಂಕಿ ನಂದಿಸಲು ಈ ಮೂರರಲ್ಲಿ ಒಂದು ಅಂಶ ನಿಷ್ಕ್ರಿಯಗೊಳಿಸಿದರೂ ಬೆಂಕಿ ತಾನಾಗಿಯೇ ನಿಯಂತ್ರಣಕ್ಕೆ ಬರಲಿದೆ. ಬೆಂಕಿ ಅವಘಡ ಸಂಭವಿಸಿದಾಗ ಯಾವ ಅಂಶವನ್ನು ತೆಗೆಯಬೇಕೆನ್ನುವ ಅರಿವಿದ್ದರೆ ಸಂರಕ್ಷಣೆ ಸುಲಭವಾಗಲಿದೆ ಎಂದರು.
ಮನೆಗಳಲ್ಲಿ ಸಂಭವಿಸುವ ಬೆಂಕಿ ಅವಘಢ ತಪ್ಪಿಸಲು ಗಾಳಿ ಆಡುವ ಸ್ಥಳದಲ್ಲಿ ಸಿಲಿಂಡರ್ ಇಟ್ಟು, ಐಎಸ್‌ಐ ಮಾರ್ಕ್‌ನ ರೆಗ್ಯುಲೇಟರ್ ಬಳಕೆ ಮಾಡಬೇಕು. ಗುಣಮಟ್ಟದ ಎಲೆಕ್ಟ್ರಿಕ್ ವೈರ್ ಅಳವಡಿಸಿ ವಿದ್ಯುತ್ ವ್ಯವಸ್ಥೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಮಮತಾ ಮಹಿಳಾ ಸಮಾಜದ ಅಧ್ಯಕ್ಷೆ ಸಹನಾ ಮಾತನಾಡಿ, ಅಗ್ನಿ ಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಜೀವದ ಹಂಗು ತೊರೆದು ಕೈಗೊಳ್ಳುವ ಕಾರ್ಯ ಶ್ಲಾಘನೀಯ ಎಂದರು.
ಸಿಲಿಂಡರ್‌ಗೆ ಬೆಂಕಿ ತಗುಲಿದಾಗ ಕೈಗೊಳ್ಳಬಹುದಾದ ಹತೋಟಿ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಸ್ವರ ಸಾಮ್ರಾಜ್ಞೆ ಎಸ್.ಜಾನಕಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ಮಮತಾ ಮಹಿಳಾ ಸಮಾಜದ ಸುನೀತಾ, ವಿಜಯ, ರಶ್ಮಿ, ರೋಹಿಣಿ, ರೇಣು, ರೂಪಾ, ಜ್ಯೋತಿ, ಹೇಮಾ, ಲಕ್ಷ್ಮೀ, ಲತಾ, ಶಾಮಲಾ, ಅನಿತಾ, ಅಗ್ನಿ ಶಾಮಕ ಸಿಬ್ಬಂದಿ ಪುನೀತ್, ಅರುಣ್‌ಕುಮಾರ್, ಮಹೇಶ್, ಧನುಷ್ ಯಾದವ್ ಮತ್ತಿತರರಿದ್ದರು.