ಹೊನ್ನೇಕುಡಿಗೆ ಸಂಪರ್ಕ ಸೇತುವೆ ಲೋಕಾರ್ಪಣೆಗೆ ಸಿದ್ದ

ಎನ್.ಆರ್.ಪುರ, ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಕಾಮಗಾರಿಯನ್ನು  ಎಂ.ಶ್ರೀನಿವಾಸ್ ವೀಕ್ಷಿಸಿದರು.
ಎನ್.ಆರ್.ಪುರ, ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಕಾಮಗಾರಿಯನ್ನು ಎಂ.ಶ್ರೀನಿವಾಸ್ ವೀಕ್ಷಿಸಿದರು.
Published on
ಎನ್.ಆರ್.ಪುರ: ಎನ್.ಆರ್.ಪುರ ಹಾಗೂ ಹೊನ್ನೇಕುಡಿಗೆ ಸಂಪರ್ಕ ಸೇತುವೆ ಉದ್ಘಾಟನೆ ಹಾಗೂ ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
ಶನಿವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 20 ಕೋಟಿ ಮಂಜೂರಾಗಿದ್ದ ಸೇತುವೆ ಕಾಮಗಾರಿ ಇದೀಗ 38 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದೆ. ರಸ್ತೆ ಅಗಲೀಕರಣಕ್ಕೆ 60 ಕೋಟಿ, ಸೇತುವೆ ನಿರ್ಮಾಣಕ್ಕೆ 38.50 ಕೋಟಿ, ಸೇತುವೆಗೆ ಹೋಗುವ ರಸ್ತೆ ನಿರ್ಮಾಣಕ್ಕೆ 6 ಕೋಟಿ ಅನುದಾನ ನೀಡಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ಅಗಲೀಕರಣಕ್ಕೆ 60 ಕೋಟಿ ರೂ. ಅನುದಾನ ಮಂಜೂರಾಗಿದೆ. ಈಗಾಗಲೇ 25 ಕೋಟಿ ಅನುದಾನ ಎಸಿ ಖಾತೆಗೆ ಜಮೆ ಆಗಿದೆ. ಈ ರಸ್ತೆ ಅಗಲೀಕರಣ ಪ್ರದೇಶಕ್ಕೆ 161 ಕುಟುಂಬಗಳು ಒಳಪಡುತ್ತವೆ. ಈಗಾಗಲೇ 150 ಜನರು ಒಪ್ಪಿಗೆ ಪತೆ ನೀಡಿದ್ದು, ಇನ್ನುಳಿದ 11ಜನರು ಒಪ್ಪಿಗೆ ನೀಡಿಲ್ಲ. ರಸ್ತೆ ಅಗಲೀಕರಣವಾದರೆ ಇವರ ಆಸ್ತಿಗಳ ಮೌಲ್ಯ 4 ಪಟ್ಟು ಹೆಚ್ಚಾಗುತ್ತದೆ. ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳುವ ಜಾಗಕ್ಕೆ ನೀಡುವ ಪರಿಹಾರದ ಹಣದಿಂದಲೇ ಉತ್ತಮ ಕಟ್ಟಡ ನಿರ್ಮಾಣ ಮಾಡಿಕೊಳ್ಳಬಹುದು. ಒಂದೇ ವರ್ಷದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಮುಗಿಸಲಾಗುವುದು.
ಶಾಸಕ ಟಿ.ಡಿ.ರಾಜೇಗೌಡ ಬಾಳೆಹೊನ್ನೂರು, ಜಯಪುರ, ಕೊಪ್ಪ ಭಾಗಗಳಲ್ಲಿ ರಸ್ತೆ ಅಗಲೀಕರಣವನ್ನು ಒಂದು ಪೈಸೆ ಪರಿಹಾರ ಹಣ ನೀಡದೆ ಮಾಡಿಸಿದ್ದಾರೆ. ನಾನು ಇಲ್ಲಿನ ಜನರಿಗೆ ಪರಿಹಾರ ಕೊಡಿಸಿದ್ದೇನೆ. ರಸ್ತೆ ಅಗಲೀಕರಣ ವಿರೋಧಿಸಿ ನ್ಯಾಯಾಲಯಕ್ಕೆ ಹೋದರೂ ಕಾಮಗಾರಿ ನಡೆಯುತ್ತದೆ ಎಂದರು.
ಈಗಾಗಲೇ ರಸ್ತೆ ಅಗಲೀಕರಣ ಕಾಮಗಾರಿ ಸಂಬಂಧ ಎಸಿ ಖಾತೆಗೆ 25 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಯಾರು ಮೊದಲು ಒಪ್ಪಿಗೆ ನೀಡುತ್ತಾರೊ ಅವರಿಗೆ ಮೊದಲು ಪರಿಹಾರ ಹಣ ಡಿಬಿಟಿ ಮೂಲಕ ಅವರ ಖಾತೆಗೆ ನೇರವಾಗಿ ಜಮೆ ಆಗಲಿದೆ. ಈಗಾಗಲೇ 151 ಜನರ ಪೈಕಿ 33 ಜನರ ನೋಂದಣೆಯಾಗಿದೆ. ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡುವ ವೇಳೆಗೆ ಶೇ.50ರಷ್ಟು ನೋಂದಣೆ ಆಗಬೇಕಾಗಿದೆ. ಇದಕ್ಕೆ ಪಪಂ ಮಾಜಿ ಅಧ್ಯಕ್ಷರು, ಸದಸ್ಯರು ಶ್ರಮಿಸಬೇಕು.
ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಪಪಂ ಮಾಜಿ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್‌ಶೆಟ್ಟಿ, ಮಾಜಿ ಸದಸ್ಯರುಗಳಾದ ಸೈಯದ್‌ವಸೀಂ, ಸುನೀಲ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net