ಕಡೂರು: ತಾಲೂಕಿನ ಹೋಬಳಿ ಮುಖ್ಯಕೇಂದ್ರದ ಹಿರೇನಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಒತ್ತುವರಿ ಮಾಡಿಕೊಂಡ 48 ಗುಂಟೆ ಜಾಗವನ್ನು ಕಂದಾಯ, ಆರೋಗ್ಯ, ಗ್ರಾಮ ಪಂಚಾಯಿತಿ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸ್ ಸಿಬ್ಬಂದಿ ಜತೆ ಜಂಟಿ ಕಾರ್ಯಾಚರಣೆ ನಡೆಸಿ ಮಂಗಳವಾರ ಒತ್ತುವರಿ ಜಾಗಕ್ಕೆ ಟ್ರಂಚ್ ಹೊಡೆಸಿ ತೆರವುಗೊಳಿಸಿದರು.
ಹಲವು ದಶಕಗಳಿಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸಲು ಜಾಗದ ಕೊರತೆ ಎದುರಾಗಿತ್ತು. ಆರೋಗ್ಯ ಇಲಾಖೆ ತನ್ನ ಜಾಗವನ್ನು ವಶಪಡಿಸಿಕೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದ ಪರಿಣಾಮ ದಾನವಾಗಿ ನೀಡಿದ ಆಸ್ಪತ್ರೆ ಜಾಗವನ್ನು ಅನ್ಯರು ಒತ್ತುವರಿ ಮಾಡಿಕೊಂಡಿದ್ದರು. ೆ.26ರಂದು ನಡೆದ ಜನಸಂಪರ್ಕ ಸಭೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೇಗೇರಿಸುವ ಕುರಿತು ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ ಆರೋಗ್ಯ ಇಲಾಖೆ ಮತ್ತು ಕಂದಾಯಾಧಿಕಾರಿಗಳು ಜಾಗ ಗುರುತಿಸಿಕೊಳ್ಳುವಲ್ಲಿ ಮಾಡಿದ ನಿರ್ಲಕ್ಷ್ಯಧೋರಣೆ ಕುರಿತು ಆಕ್ರೋಶಗೊಂಡ ಶಾಸಕರು ಒತ್ತುವರಿ ಜಾಗ ತೆರವುಗೊಳಿಸಲು ದಿನ ನಿಗಪಡಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದ್ದರು.
ಸಭೆ ನಿರ್ಣಯದಂತೆ ಮಂಗಳವಾರ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಗ್ರಾಪಂ ಆಡಳಿತಾಧಿಕಾರಿ ದೇವರಾಜ್ ನೇತೃತ್ವದ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ಇಲಾಖೆಗೆ ಸೇರಿದ ಜಾಗಕ್ಕೆ ಟ್ರಂಚ್ ಹೊಡೆಸಿ ಒತ್ತುವರಿ ತೆರವುಗೊಳಿಸಲಾಯಿತು.
ಸುಮಾರು 48 ಗುಂಟೆ (1.8 ಎಕರೆ) ಜಾಗ ತೆರವುಗೊಳಿಸಲಾಗಿದೆ. ಈ ಜಾಗದ ಪ್ರತಿಯೊಂದು ದಾಖಲೆಗಳನ್ನು ಇಲಾಖೆ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಆಸ್ಪತ್ರೆ ಜಾಗವನ್ನು ಆರೋಗ್ಯ ಇಲಾಖೆ ಸುಪರ್ದಿಗೆ ಒಳಪಡಿಸಿಕೊಳ್ಳಲು ಕ್ರಮಬದ್ಧವಾಗಿ ದಾಖಲಿಸಲು ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದರು.
ಬಹುವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಒತ್ತುವರಿ ಜಾಗದ ಪ್ರಕರಣವನ್ನು ಸ್ಥಳೀಯ ತಾಲೂಕು ಆಡಳಿತ ಒತ್ತುವರಿ ಜಾಗ ತೆರವುಗೊಳಿಸಿರುವುದರಿಂದ ಗ್ರಾಮದ ಆಸ್ಪತ್ರೆ ಅಭಿವೃದ್ಧಿಗೆ ಸಹಕಾರಿಯಾಗಿದೆ. ಯಾವುದೇ ಆಸ್ಪದ ನೀಡದೆ ಒತ್ತುವರಿ ಜಾಗದ ಪ್ರಕರಣ ಬಗೆಹರಿದಿದ್ದಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಹತ್ತಾರು ಹಳ್ಳಿಗಳ ಜನರ ಆರೋಗ್ಯ ಕಾಪಾಡುವ ಹಿರೇನಲ್ಲೂರು ಗ್ರಾಮದ ಆರೋಗ್ಯ ಕೇಂದ್ರ ಮುಂದಿನ ದಿನಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ ಎಂದು ಕೇದಿಗೆರೆ ಓಂಕಾರ್ ತಿಳಿಸಿದರು.